ಸರಗೂರು: ಹಬ್ಬಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಜಾತಿ, ಧರ್ಮಗಳನ್ನು ಮಧ್ಯದಲ್ಲಿ ತರಬಾರದು ಎಂದು ಸರಗೂರು ಪೊಲೀಸ್ ಠಾಣೆ ಉಪ ನಿರೀಕ್ಷಕ ಆರ್. ಕಿರಣ್ ತಿಳಿಸಿದರು.
ಪಟ್ಟಣದ ಠಾಣೆ ಆವರಣದಲ್ಲಿ ಶುಕ್ರವಾರ ನಡೆದ ರಂಜಾನ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು. ಸಾಮಾಜಿಕ ಸುವ್ಯವಸ್ಥೆ ಕದಲುವಂತಹ ಕೃತ್ಯ ಎಸಗಿದವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಆದರೆ ಇತ್ತೀಚೆಗೆ ಅಪರಾಧಿಗಳ ಪರವಾಗಿ ಸಮುದಾಯ, ಸಂಘಟನೆಗಳು ಸಹಕಾರಕ್ಕೆ ಬರುತ್ತಿರುವುದು ಸರಿಯಲ್ಲ. ರಂಜಾನ್ ಹಬ್ಬದ ಪ್ರಯುಕ್ತ ಎಲ್ಲ ಸಮುದಾಯದ ಜನರು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ಗಲಾಟೆ, ಜನರಿಗೆ ತೊಂದರೆಯಾಗದ ರೀತಿಯಲ್ಲಿ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮಾತನಾಡಿ, ರಂಜಾನ್ ಹಬ್ಬದ ವೇಳೆ ನಾನಾ ಮಸೀದಿಗಳ ಪಕ್ಕದಲ್ಲಿ ಟ್ರಾಫಿಕ್, ವಾಹನಗಳ ಶಬ್ದ ನಿಯಂತ್ರಣ ಮಾಡಬೇಕು. ಹಬ್ಬದ ಪ್ರಯುಕ್ತ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿರುತ್ತದೆ. ಆ ವೇಳೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್ ಐ ಆರ್. ಕಿರಣ್ ರವರು, ರಂಜಾನ್ ಹಬ್ಬದ ಪ್ರಯುಕ್ತ ಮಸೀದಿ ಮತ್ತು ನಾನಾ ವೃತ್ತಗಳಲ್ಲಿ ಹೆಚ್ಚುವರಿಯಾಗಿ ಹೋಂ ಗಾರ್ಡ್‌ನ್ನು ನೇಮಕ ಮಾಡಲಾಗುವುದು. ಯಾವುದೇ ರೀತಿಯ ಘರ್ಷಣೆಯಾಗದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು ಅದಕ್ಕೆ ಸೂಕ್ತ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಇಮ್ರಾನ್ ಅಹಮದ್ ,ಚಂದ್ರು, ಶಿವರಾಜು, ಮುಖಂಡರು ಸೇರಿದಂತೆ ಇತರರು ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


