ಸರಗೂರು: “ಮಾನವಕುಲದ ಒಳಿತಿಗಾಗಿ ಸರ್ವರೂ ಪ್ರಾರ್ಥಿಸುವುದು ಅತ್ಯಂತ ಅವಶ್ಯಕ. ಮಾನವೀಯತೆಯಿಂದ ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಬಾಳುವುದು ಮುಖ್ಯ,” ಎಂದು ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಖಾದ್ರಿಯಾದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ, ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದ ನಂತರ ಅವರು ಮಾತನಾಡಿದರು.
ಸಾದಿ ಮಹಲ್ ನಿರ್ಮಾಣದ ಭರವಸೆ:
ಸರಗೂರು ಪಟ್ಟಣದಲ್ಲಿ ಸಾದಿ ಮಹಲ್ ಭವನ ನಿರ್ಮಾಣ ಮಾಡಿಕೊಡಬೇಕೆಂದು ಮುಸ್ಲಿಂ ಬಾಂಧವರು ಪ್ರಮುಖ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, “ಹೆಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಈಗಾಗಲೇ ಸಾದಿ ಮಹಲ್ ಇದೆ. ಅದೇ ಮಾದರಿಯಲ್ಲಿ ಸರಗೂರು ಪಟ್ಟಣದಲ್ಲೂ ಸಾದಿ ಮಹಲ್ ನಿರ್ಮಾಣಕ್ಕೆ ಜಾಗ ಗುರುತಿಸಿ, ಕಾಂಗ್ರೆಸ್ ಸರ್ಕಾರದ ವತಿಯಿಂದ ಖಂಡಿತವಾಗಿಯೂ ಭವನ ನಿರ್ಮಿಸಿಕೊಡಲಾಗುವುದು,” ಎಂದು ಭರವಸೆ ನೀಡಿದರು.
ಅಲ್ಲದೆ, ಖಾದ್ರಿಯ ಸುತ್ತ ಕಾಂಪೌಂಡ್ ನಿರ್ಮಾಣದ ಬೇಡಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಾಗದ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪೂರೈಸುವುದಾಗಿ ತಿಳಿಸಿದರು.
ವಿವಿಧತೆಯಲ್ಲಿ ಏಕತೆ ನಮ್ಮ ಮಂತ್ರ:
“ಭಾರತ ದೇಶವು ವಿವಿಧ ಜಾತಿ ಮತ್ತು ಸಂಸ್ಕೃತಿಗಳಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ; ಬದಲಾಗಿ ಪ್ರೀತಿಯನ್ನೇ ಕಲಿಸುತ್ತವೆ. ಇದನ್ನು ಅರಿತು ನಡೆದರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ,” ಎಂದು ಅವರು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸರಗೂರು ಮುಸ್ಲಿಂ ಸಮಾಜದ ಜಾಮಿಯಾ ಮಸೀದಿ ಗುರುಗಳು ಅಬ್ದುಲ್ ರಷೀದ್, ಯಜಮಾನರಾದ ಇದಾಯತ್ ಉಲ್ಲಾ ಷರೀಫ್, ಮಜೀದ ನೂರ್ ಅಬ್ದುಲ್ ಜಲೀಲ್, ಅಮೀರ್ ಸುಹೇಲ್, ಅನಸ್, ಯೂನೂಸ್, ಜಲೀಲ್, ಜಾವೀದ್, ಸುಭಾನ್, ಇಬ್ರಾಹಿಂ, ಅಬ್ದುಲ್ ವಾಜಿದ್, ಮಪ್ತಿರುಲ್ಲಾ, ಯಾಸೀನ್, ಬಾಷಾ, ಮಹಮದ್ ಅಲಿ, ಮುಖಂಡರು. ಪಪಂ ಸದಸ್ಯ ಶ್ರೀನಿವಾಸ,ಮಾ ಜಿಪಂ ಸದಸ್ಯ ಪಿ.ರವಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಟೌನ್ ಅಧ್ಯಕ್ಷ ಎಸ್ ಎನ್ ನಾಗರಾಜು, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಮುಖಂಡರಾದ ಆರ್ಯ ಮಹೇಶ್, ಶಿವನಂಜು, ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


