ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಅಭಾವ ಸೃಷ್ಟಿಯಾಗಿದ್ದು, ಜಿಲ್ಲೆಯ ಸುಮಾರು 7ಕ್ಕೂ ಅಧಿಕ ಪೆಟ್ರೋಲ್ ಬಂಕ್ ಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿವೆ. ಇದರಿಂದಾಗಿ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.
ವರದಿಯ ಪ್ರಕಾರ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ವದಂತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಗಿಬಿದ್ದು ಪೆಟ್ರೋಲ್ ಮತ್ತು ಡಿಸೇಲ್ ಖರೀದಿಸಿದ್ದರಿಂದ ಸ್ಟಾಕ್ ಬೇಗನೇ ಖಾಲಿಯಾಗಿದೆ.
ಬೀದರ್ ನಗರದ ಪ್ರಮುಖ ವೃತ್ತವಾದ ಬಸವೇಶ್ವರ ವೃತ್ತದ ಬಳಿ ಇರುವ ‘ನಯಾರಾ’ ಪೆಟ್ರೋಲ್ ಬಂಕ್ ಸೇರಿದಂತೆ ನಗರದ ವಿವಿಧೆಡೆ ಇರುವ 7ಕ್ಕೂ ಹೆಚ್ಚು ಬಂಕ್‌ಗಳಲ್ಲಿ ಬುಧವಾರ ರಾತ್ರಿಯಿಂದಲೇ ಇಂಧನ ಖಾಲಿಯಾಗಿದೆ. ಸ್ಟಾಕ್ ಇಲ್ಲದ ಕಾರಣ ಬಂಕ್ ಮಾಲೀಕರು ಬಾಗಿಲು ಹಾಕಿದ್ದಾರೆ. ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಸಾರ್ವಜನಿಕರು ಬಂಕ್‌ಗಳು ಮುಚ್ಚಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸುತ್ತಾ ವಾಪಸ್ ಹೋಗುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆಟ್ರೋಲ್ ಬಂಕ್ ಮಾಲೀಕರು, “ಮಂಗಳೂರಿನಿಂದ ಬರಬೇಕಿದ್ದ ಪೆಟ್ರೋಲ್ ಮತ್ತು ಡಿಸೇಲ್ ಟ್ಯಾಂಕರ್ ಗಳು ಇನ್ನೂ ಬಂದಿಲ್ಲ. ಈ ವಿಳಂಬದಿಂದಾಗಿ ನಮ್ಮಲ್ಲಿ ಸ್ಟಾಕ್ ಖಾಲಿಯಾಗಿದೆ. ತೈಲ ತುಂಬಿದ ಗಾಡಿಗಳು ಬಂದ ತಕ್ಷಣ ಎಂದಿನಂತೆ ಪೂರೈಕೆ ಆರಂಭಿಸಲಾಗುವುದು,” ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


