ಶಿರಾ: ಪ್ರಧಾನ ಮಂತ್ರಿ ಕುಸುಮ್ (PM-KUSUM) ಯೋಜನೆಯಡಿ ತಮ್ಮ ಪಾಲಿನ ವಂತಿಗೆ ಹಣ ಪಾವತಿಸಿ ವರ್ಷಗಳೇ ಕಳೆದರೂ ರೈತರಿಗೆ ಸೌರ ವಿದ್ಯುತ್ ಸಂಪರ್ಕ ನೀಡದೆ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತವಾಗಿದೆ.
ಶಿರಾದಲ್ಲಿ ಸುಮಾರು 134 ರೈತರು ಸೌರ ವಿದ್ಯುತ್ ಪಂಪ್‌ಸೆಟ್‌ಗಳಿಗಾಗಿ (5 ರಿಂದ 12 HP ವರೆಗೆ) ಸಾಲ ಮಾಡಿ ಹಣ ಪಾವತಿಸಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯಬೇಕಿದ್ದರೂ, ಇದುವರೆಗೂ ಒಬ್ಬ ರೈತನಿಗೂ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ.
ಕೆಆರ್‌ಇಡಿಎಲ್ (KREDL) ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ 10 ಕಂಪನಿಗಳಿಗೆ ಒಟ್ಟು ₹1.77 ಕೋಟಿ ಮೊತ್ತವನ್ನು ಪಾವತಿಸಲಾಗಿದೆ. ಆದರೂ ಕಾಮಗಾರಿಗಳು ಪ್ರಾರಂಭವಾಗದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೆಡೆ ಮಳೆಯಿಲ್ಲದೆ ಕೆರೆ–ಕುಂಟೆಗಳು ಬತ್ತುತ್ತಿವೆ, ಮತ್ತೊಂದೆಡೆ ಕೊಳವೆಬಾವಿಗಳಲ್ಲಿ ನೀರಿದ್ದರೂ ವಿದ್ಯುತ್ ಇಲ್ಲದೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮುಡಿಮಡು ರಂಗಶ್ವಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಅಧಿಕಾರಿಗಳು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ” ಎಂದು ದೂರಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ತಕ್ಷಣವೇ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಹಮತ್ ವುಲ್ಲಾಖಾನ್, ಟಿ.ಡಿ. ನರಸಿಂಹಮೂರ್ತಿ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು. ರೈತರ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


