ಚಿಕ್ಕನಾಯಕನಹಳ್ಳಿ: ಹುಳಿಯಾರಿನ ದೇವರಾಜ ಅರಸು ಮುತ್ತಿನ ಸಹಕಾರ ಸಂಘದಲ್ಲಿ ಪಿಗ್ಮಿ ಹಣ ಕಳೆದುಕೊಂಡ ಸಂತ್ರಸ್ತರು ಶಾಸಕ ಸಿ.ಬಿ. ಸುರೇಶ್ ಬಾಬು ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು.
ಮನವಿ ಸಲ್ಲಿಸುವ ವೇಳೆ ತೀವ್ರ ಹತಾಶೆಗೊಂಡ ಕೆಲವು ಸಂತ್ರಸ್ತರು, ಹಣ ಸಿಗದಿದ್ದರೆ ನಮಗೆ ಸಾವೊಂದೇ ದಾರಿ’ ಎಂದು ತಾವು ತಂದಿದ್ದ ವಿಷದ ಬಾಟಲಿಗಳನ್ನು ತೆಗೆದು ಕುಡಿಯಲು ಯತ್ನಿಸಿದರು. ಈ ಸಂದರ್ಭದಲ್ಲಿ ಶಾಸಕರು ಮತ್ತು ಅಲ್ಲಿದ್ದವರು ಸಂತ್ರಸ್ತರ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಕಿತ್ತುಕೊಂಡರು.
ಸಂಘದ ಪಿಗ್ಮಿ ಸಂಗ್ರಹಗಾರರಾಗಿದ್ದ ದಿವಾಕರ್ ಇತ್ತೀಚೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸಂತ್ರಸ್ತರ ಆತಂಕವನ್ನು ಹಿಮ್ಮಡಿಗೊಳಿಸಿದೆ. ಜೊತೆಗೆ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಕಚೇರಿಗೆ ಬೀಗ ಜಡಿದು ತಲೆಮರೆಸಿಕೊಂಡಿದ್ದು, ಬಡವರ ಹಣಕ್ಕೆ ಯಾವುದೇ ಭರವಸೆ ಸಿಗದಂತಾಗಿದೆ. ಹಾಗಾಗಿ ಸಹಕಾರ ಸಂಘದ ಮೇಲಧಿಕಾರಿಗಳಿಗೆ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಪಿಗ್ಮಿ ಸಂತ್ರಸ್ತರು ಅಂಗಲಾಚಿದರು.
ಆಗ ಶಾಸಕ ಸಿ.ಬಿ. ಸುರೇಶ್ ಬಾಬು, ಸ್ಥಳದಲ್ಲೇ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರವಾಣಿ ಕರೆ ಮಾಡಿ ಬಡವರು ಕಷ್ಟಪಟ್ಟು ಉಳಿಸಿದ ಹಣವನ್ನು ಗುಳುಂ ಮಾಡಿದವರನ್ನು ಸುಮ್ಮನೆ ಬಿಡಬಾರದು. ತಕ್ಷಣವೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಹಣ ದುರ್ಬಳಕೆ ಮಾಡಿಕೊಂಡಿರುವ ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ, ಮತ್ತು ಅವರಿಗೆ ಆದಷ್ಟು ಬೇಗ ಹಣ ಮರಳಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


