ಬೀದರ್: ಜಿಲ್ಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬೀದರ್ ಸಬ್ ಅರ್ಬನ್ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹6.73 ಲಕ್ಷ ಮೌಲ್ಯದ 5 ನಾಡ ಪಿಸ್ತೂಲ್, 26 ಜೀವಂತ ಗುಂಡುಗಳು ಹಾಗೂ 5 ತಲ್ವಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀದರ್ ನಗರದ ಗುರುದ್ವಾರ ಸಮೀಪದ ನಿವಾಸಿ ಅಮನ್‌ಜೀತ್ ಸಿಂಗ್ ರಂಜೀತ್ ಸಿಂಗ್ (21) ಹಾಗೂ ಶಹಾಗಂಜ್‌ನ ವೆಂಕಟೇಶ್ ತುಕಾರಾಮ (21) ಬಂಧಿತ ಆರೋಪಿಗಳು. ಇವರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದ ಮಹಾರಾಷ್ಟ್ರದ ನಾಂದೇಡ್ ಮೂಲದ ಬಲಬೀರ್ ಸಿಂಗ್ ಪ್ರತಾಪ್ ಸಿಂಗ್ (23) ಮತ್ತು ನವಜೋತ್ ಸಿಂಗ್ ಇಂದೇರ್ ಸಿಂಗ್ (24) ಎಂಬುವವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ನಾಲ್ವರ ವಿರುದ್ಧ ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ಜುಲೈ 15ರ ಬುಧವಾರ ಸಂಜೆ ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕಪೇಟ್ ರಿಂಗ್ ರೋಡ್ ನ ಖಾಸಗಿ ಶಾಲೆಯೊಂದರ ಸಮೀಪ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಪ್ರದೀಪ್ ಗುಂಟಿ ಅವರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಆದೇಶಿಸಿದರು. ಡಿವೈಎಸ್ ಪಿಗಳಾದ ಎನ್.ಡಿ.ಸನದಿ, ದೂದ್ ಪೀರ್ ಹುಸೇನಸಾಬ್ ಮುಲ್ಲಾ ಹಾಗೂ ಶರಣಪ್ಪ ಅವರ ನೇತೃತ್ವದ ತಂಡವು ಸ್ಥಳದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಶಸ್ತ್ರಾಸ್ತ್ರ ಸಮೇತ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.
ಬಂಧಿತರಿಂದ 5 ನಾಡ ಪಿಸ್ತೂಲ್, 26 ಜೀವಂತ ಮದ್ದುಗುಂಡುಗಳು, 10 ಎಮ್.ಟಿ. ಕೇಸ್‌ಗಳು, 5 ತಲ್ವಾರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಸೇರಿದಂತೆ ಒಟ್ಟು ₹6.73 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಳ್ಳಲಾದ ಪಿಸ್ತೂಲ್‌ಗಳು ತಲಾ 8 ರೌಂಡ್ಸ್ ಸಾಮರ್ಥ್ಯ ಹೊಂದಿದ್ದು, ಆರೋಪಿಗಳು ಈಗಾಗಲೇ 10 ರೌಂಡ್ಸ್ ಗುಂಡುಗಳನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸಾರ್ವಜನಿಕರು ಯಾವುದೇ ರೀತಿಯ ಅಕ್ರಮ ಶಸ್ತ್ರಾಸ್ತ್ರ, ಮದ್ದುಗುಂಡು ಸಂಗ್ರಹಣೆ ಅಥವಾ ಇತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಬಾರದು.”
— ಪ್ರದೀಪ ಗುಂಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ ಪ್ರದೀಪ ಗುಂಟಿ ಅವರು ಪ್ರಕರಣದ ವಿವರಗಳನ್ನು ಹಂಚಿಕೊಂಡರಲ್ಲದೆ, ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


