ಚಿಕ್ಕನಾಯಕನಹಳ್ಳಿ: ಹುಳಿಯಾರು ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಈ ಬಾರಿ ಅಚ್ಚರಿಯ ಬದಲಾವಣೆ ಕಂಡು ಬಂದಿದ್ದು ಶಾಸಕ ಸಿ.ಬಿ. ಸುರೇಶ್ ಬಾಬು, ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಕೇವಲ 60 ರಿಂದ 70 ನಿಮಿಷಗಳಲ್ಲಿ ಮುಕ್ತಾಯಗೊಂಡು ಹೊಸ ದಾಖಲೆ ಬರೆದಿದೆ.
ಅಜೆಂಡಾದಲ್ಲಿದ್ದ 60 ವಿಷಯಗಳಿಗೂ ಯಾವುದೇ ಪ್ರತಿರೋಧವಿಲ್ಲದೆ ಸರ್ವಾನುಮತದ ಅಂಗೀಕಾರ ದೊರೆತಿದ್ದು ವಿಶೇಷವಾಗಿತ್ತು. ಗಂಭೀರ ಚರ್ಚೆ ಬಯಸುವ ಸುಮಾರು 30ಕ್ಕೂ ಹೆಚ್ಚು ವಿಷಯಗಳು ಇದ್ದರೂ, ಈ ಬಾರಿ ಎಲ್ಲವೂ ಸುಗಮವಾಗಿ ಪಾಸ್ ಆಗಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಸಭೆಯ ಮತ್ತೊಂದು ವಿಶೇಷವೆಂದರೆ ಮುಖ್ಯಾಧಿಕಾರಿ ಮಂಜುನಾಥ್ ಪಂಚಾಯಿತಿ ವತಿಯಿಂದ ಅಧ್ಯಕ್ಷರಿಗೆ ಕಾರು ಖರೀದಿಸುವ ಪ್ರಸ್ತಾವನೆಯನ್ನು ಅವರು ನಯವಾಗಿ ತಿರಸ್ಕರಿಸಿದರು. ಅಧ್ಯಕ್ಷರಿಗೆ ಕಾರಿನ ಅಗತ್ಯವಿದೆ ಎಂಬ ಸದಸ್ಯರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರಿಗಾಗಿ ಕಾರು ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸುವ ಮೂಲಕ ಸಾರ್ವಜನಿಕರ ಲಕ್ಷಾಂತರ ರೂಪಾಯಿ ಹಣ ಪೋಲಾಗುವುದನ್ನು ತಪ್ಪಿಸಿ ಗಮನ ಸೆಳೆದರು.
ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಕಣ್ಣಾವಲು: ಹೆಚ್ಚುತ್ತಿರುವ ಕಳ್ಳತನ ಹಾಗೂ ಅಪರಾಧ ಪ್ರಕರಣಗಳನ್ನು ತಡೆಯಲು ಪಟ್ಟಣದಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಪೊಲೀಸ್ ಇಲಾಖೆ ಅಳವಡಿಸಿದ್ದ ಕ್ಯಾಮೆರಾಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದ್ದವು. ಈಗ ಪಂಚಾಯಿತಿಯಿಂದಲೇ ಕ್ಯಾಮೆರಾ ಅಳವಡಿಸಿ, ಅದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲು ತೀರ್ಮಾನಿಸಿರುವುದು ನಾಗರಿಕರಲ್ಲಿ ಸಂತಸ ತಂದಿದೆ. ಒಟ್ಟಾರೆಯಾಗಿ ಜಹೀರ್ ಸಾಬ್, ದಸ್ತಗಿರಿ ಸಾಬ್ ಸೇರಿದಂತೆ ಕೆಲವು ಸದಸ್ಯರ ಅನುಪಸ್ಥಿತಿಯ ನಡುವೆಯೂ ನಡೆದ ಈ ಸಭೆಯು, ಹುಳಿಯಾರು ಪಟ್ಟಣ ಪಂಚಾಯಿತಿ ಇತಿಹಾಸದಲ್ಲೇ ಅತ್ಯಂತ ವೇಗದ ಮತ್ತು ಸಹಮತದ ಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


