ಊರು: ಸುರಪುರವೆಂಬ ಹಳ್ಳಿ, ಮಿತ್ರರ ಹೆಸರು: ಸೋಮ, ಭೀಮ, ಮತ್ತು ಚಾಮ. ವರ್ಗ: ಸ್ವಲ್ಪ ಮಧ್ಯಮ ವರ್ಗದ ಬಡತನದ ಜೀವನ, ಮಾತಿಗೆ ಸೇರುವ ಜಾಗ: ಊರ ಹೊರಗಿನ ಅರಳಿ ಕಟ್ಟೆ.
ಚಾಮ: (ಆತುರದಿಂದ ಓಡಿಕೊಂಡು ಬಂದು ಸೋಮನ ಮನೆ ಮುಂದೆ ಇದ್ದ ಸೋಮನನ್ನು ಕುರಿತು..) ಲೇ ಸೋಮ ಭೀಮನಿಗೆ ಹುಚ್ಚು ನಾಯಿ ಕಡಿದಿದೆಯಂತೆ ಬಾರೊ ಹೋಗಿ ನೋಡಿಕೊಂಡು ಬರುವ..(ಗಾಬರಿ)
ಸೋಮ: ಹೌದನ್ಲ.. ಅಯ್ಯೋ ಫ್ರಂಡು ಗೆ ಇಂತ ಸ್ಥಿತಿ ಬಂತೇ? ಸರಿ ನಡಿ ಹೋಗುವ ಪಾಪ ಟ್ರೀಟ್ ಮೆಂಟ್ ಗ್ರೀಟ್ ಮೆಂಟ್ ತಗೊಂಡವನೋ ಇಲ್ವೋ ನೋಡವ ನಡಿ..(ಓಡೋಡಿ ಕೊಂಡು ಭೀಮನ ಮನೆಗೆ ಬರುತ್ತಾರೆ..)
ಸೋಮ: ( ಕಾಲು ಹಿಡಿದುಕೊಂಡು ಕೂತಿದ್ದ ಭೀಮನನ್ನು ನೋಡಿ..) ಅಯ್ಯೋ ಯಾಕ್ಲಾ ಹೀಗಾಯ್ತು, ಹುಚ್ಚು ನಾಯಿ ಕಚ್ಚೈತಂತೆ….
ಭೀಮ: ಯಾವನ್ಲ ಹೇಳಿದ್ದು ಹುಚ್ಚು ನಾಯಿ ಕಚ್ಚೈತೆ ಅಂತ.. ಹುಚ್ಚು ನಾಯಿ ಅಲ್ಲ ಕಣ್ಲಾ ಬೀದಿ ನಾಯಿ ಕಚ್ಚಿರದು..
ಸೋಮ: ಹೌದನ್ಲ..ಯಾವ ಮೋಟ್ ಗೋಡೆ ಹಾರಕ್ಕೆ ಹೋಗಿದ್ಲಾ…?
ಭೀಮ: ಏ..ಅದೇ ಆ ಕೊನೆ ಮನೆ ಮೋಟಮ್ಮ….ಏ… ಥೂ… ಇವನೇನ್ಲ ಇಂಗೆ ತಲೆ ಕೆಡಿಸ್ತಾನೆ… ಅದೇನು ಅಲ್ಲ, ಹಾಗೇನು ಇಲ್ಲ…ಮಜ್ಜಿಗೆ ಪಾಕೆಟ್ ತರಕ್ಕೆ ನಿಂಗಂದು ಕೆಂಪು ಚಪ್ಪಲಿ ಹಾಕ್ಕೊಂಡು ಹೋಗಿದ್ನಾ…
ಸೋಮ..ಚಾಮ: ಹೂ…ಓ ಹೀಗೆ… ಅಣ್ಣಂದು.. ಎಲ್ಲ ಗೊತ್ತಾಯ್ತು ಬಿಡು, ಮುಂದಕ್ಕೆ ಏನು ಹೇಳದು ಬ್ಯಾಡ…
ಭೀಮ: ಲೇ ಹಾಗೇನು ಇಲ್ಲ ಕಂಡ್ರುಲಾ…
ಸೋಮ: ಹೂ ಹೋಗ್ಲಿ ಬಿಡ್ಲ ಗೊತ್ತಾತು, ಕೆಂಪು ಚಪ್ಪಲಿ ನೋಡಿ ಆ… ಬೀ…..ದಿ ನಾಯಿ ಕಚ್ಚರ್ ಬೇಕು.. ಗೊತ್ತಾತು ಬಿಡ್ಲಾ.
ಭೀಮ: ಹೂ ಕಣ್ಲಾ… ನೀನೊಬ್ನೇ ಕಣ್ಲಾ ನನ್ನ ಸರಿಯಾಗಿ ತಿಳ್ ಕೊಂಡಿರದು..
ಸೋಮ: ಸರಿ ಅದು ಹೋಗ್ಲಿ ಇಂಗ್ಳಿಷನ್ ತಗೊಂಡೋ ಅದು ಇಲ್ವೋ….?
ಭೀಮ: ನನ್ ತವು ಕಾಸು ಇಲ್ಲ ಕಣ್ಳಾ, ಕಾಸು ವಸಿ ಇತ್ತು ಚಪ್ಪಲಿ ತಗೊಂಡೆ ಕಣ್ಲಾ ಈಗಿಲ್ಲ.
ಸೋಮ: ಲೇ ಚಾಮ ನಿನ್ ಹತ್ರ ವಸಿ ದುಡ್ಡು ಐತೆನ್ಲಾ….?
ಚಾಮ: “ಏ ಅವತ್ತು ಅರಳಿ ಮರದ್ ತವು ಜಗಳ ಆಡಿಕೊಂಡು ಕಿತ್ತೋದ್ ಚಪ್ಲೀ ಇನ್ನ ಹೊಸದು ತಗಳಕ್ಕೆ ಆಗಿಲ್ಲ ನೋಡು, ಬರಿಗಾಲಲ್ಲೇ ಓಡಾಡ್ಕೊಂಡು ಇವ್ನಿ, ಇನ್ನ ನನ್ ತವು ದುಡ್ಡು ಎಲ್ಲಿಂದ ಬರಬೇಕ್ಲಾ ದುಡ್ಡು ಇಂಗ್ಳಿಷನ್ ಗೆ.. ನೀನೆ ಇದ್ರೆ ಕೊಡ್ಲಾ..ಹೋಗ್ಲಿ ಪಾಪ ಫ್ರಂಡು..
ಸೋಮ: ನನ್ ತವು ದುಡ್ಡು ಇತ್ತು ಕಣ್ಳಾ ಭೀಮ, ಆಚೆ ಮೊನ್ನೆ ಆ ಕರಿನಿಂಗ ಸಾಲ ಬೇಕು ಅಂತ ಕೇಳ್ದ, ಎಮರ್ಜೆನ್ಸಿ ಇತ್ತಂತೆ ಕೊಟ್ಟು ಕಳಿಸ್ದೆ.. ನೋಡು…
ಭೀಮ: ಲೇ ನೀನು ಸಾಲ ಕೊಡೊ ನನ್ ಮಗಾನೇನ್ಲ…: ನಾನು ನಂಬೇಕ್ಲಾ, ನೀನೆ ದುಡ್ಡಿಗೆ ಪರದಾಡ್ತಿದ್ದೆ…?
ಸೋಮ: ಹೂ ಕಣ್ಲಾ… ಅವತ್ತು ಯಜಮಾನರ ಮನೆಗೆ ಕೆಲಸಕ್ಕೆ ಹೋಗಿದ್ದೆ ಸಂಜೆಮಟ್ಟ ಕೂಲಿ ಕೊಟ್ರು…ಅದೇ ದುಡ್ಡ ಕರಿನಿಂಗಂಗೆ ಕೊಟ್ಟಿದ್ದು
ಭೀಮ: ಲೇ ನಂಗೇನು ಗೊತ್ತಿಲ್ವನ್ಲೇ. ಅವತ್ತೇ ಸಂಜೆ ಮಟ್ಟ ಯಜಮಾನ್ರು ಮನೆ ಮಂಕ್ರಿ ಕದ್ದು, ಅದು ಗೊತ್ತಾಗಿ ನಿಂಗೆ ಕೂಲಿನು ಕೊಡದೇ ಒದ್ದು ಓಡಿಸಿದ್ರಂತೆ.
ಸೋಮ: ಹೂ ಕಣ್ಲಾ ಅದು ನಿಂಗೆ ಹೆಂಗೆ ಗೊತ್ತಾತು… ಏ ಥೂ..ಥೂ ಅದು ನಾನು ಅಲ್ಲ ಕಣ್ಳಾ.. ಮಂಕ್ರಿ ಕದ್ದದ್ದು ಬಸ್ಯ..
ಚಾಮ: ನಾನು ಕೇಳ್ದಂಗೆ ಇತ್ತು ಸೋಮ ಅದು ನೀನೇ ಅಂತೆ..
ಸೋಮ: ಏ ನಿಂಗೆ ಯಾರೋ ರಾಂಗ್ ಇನ್ ಫರ್ ಮೇಷನ್ ಕೊಟೌರೆ ಬಿಡ್ಲಾ, ಹು ಕಣ್ಲಾ ಭೀಮ ನಿಂಗು ಯಾರೊ ರಾಂಗ್ ಇನ್ ಫರ್ ಮೇಷನ್ ಕೊಟೌರೆ ನಂಗೆ ಆಗ್ದೇ ಇದ್ದೋರು..
ಭೀಮ: ಮತ್ತೆ ಇವತ್ತು ಬೆಳಿಗ್ಗೆ ಬಸ್ಯ ಸಿಕ್ಕಿ ಯಜಮಾನ್ರು ಮನೆ ಕೆಲ್ಸಕ್ಕೆ ಓಯ್ತಿದಿನಿ ಅಂದ..
ಸೋಮ: ಎಲ್ಲೋ ಮಂಕ್ರಿ ದುಡ್ಡು ಕಟ್ಟಿ ಕೊಟ್ಟಿರ್ ಬೇಕು ಇಲ್ಲ ಮಂಕ್ರಿನೇ ತಂದು ವಾಪಸ್ ಕೊಟ್ಟಿರ್ ಬೇಕು..
ಭೀಮ: ಇರ್ಬೋದು ಬಿಡ್ಲ ನೀನು ಏಳದು ಎಲ್ಲ ಸತ್ಯ, ಪಾಪ ನೀನು ಎಂತ ಒಳ್ಳೆ ಮನ್ಷ್ಯ ಅಂತ ಎಲ್ಕ ಗೊತ್ತು.. ಇನ್ ನಂಗೆ ಗೊತ್ತಿಲ್ವೇ…?
ಸೋಮ: ಲೇ ಭೀಮ ಏನೋ ಬೀದಿ ನಾಯಿ ಕಚ್ಚೈತೆ ಅಂತ ನಿನ್ನ ನೋಡಕ್ಕೆ ಬಂದ್ರೆ ನೀನ್ ಏನ್ಲಾ ವಿಸಯ ತಗೊಂಡು ಎಲ್ಲೆಲ್ಲೋ ಹೋಗ್ಬಿಟ್ಟಲ್ಲಾ..? ಇವೆಲ್ಲ ಬೇಕಿತ್ಲಾ ಇವಗ..
ಭೀಮ: ಲೇ ಯಾವನ್ಲಾ ಹೇಳಿದ್ದು ನಂಗೆ ಬೀದಿ ನಾಯಿ ಕಚ್ಚೈತೆ ಅಂತ, ಬೀದಿ ನಾಯಿ ಅಲ್ಲ ಕಣ್ಳಾ… ನಂಗೆ ಕಚ್ಚಿರದು ಹುಚ್ಚು ನಾಯಿ ಕಣ್ಳಾ, ಅದೇ ಆ ಕೊನೆ ಮನೆ ಮೋಟಮ್ಮ ಮನೆ ಮೋಟ್ ಗೋಡೆ ಹಾರಕ್ಕೆ ಹೋಗಿ ಬಂದು ಕಚ್ತು ಬೌ ಬೌ ಬೌ…
ಸೋಮ: (ಮೇಲಕ್ಕೆ ತಡವರಿಸಿಕೊಂಡು ಎದ್ದು) ಲೇ ಚಾಮ ಇವ್ನಿಗೆ ಈಗ ವಿಸ ಮೇಲಕ್ಕೆ ಏರ್ಕೊಂಡೈತೆ ಕಣ್ಳಾ, ಇಲ್ಲಿಗ್ ಮಟ್ಟ ಚಂದಾಗ್ ಮಾತಾಡ್ದ ಈಗ ವಿಸ ಏರ್ಕೊಂಡುಬುಟ್ಟೈತೆ.. ಓಡ್ಲಾ ಓಡ್ಲಾ ಇಲ್ಲಿಂದ ಮತ್ತೆ ನಮ್ ಗೂ ಕಚ್ಚಿ ಗಿಚ್ ಬಿಟ್ಟಾನು (ಎನ್ನುತ್ತಾ ಅಲ್ಲಿಂದ ಇಬ್ಬರೂ ಓಟ ಕಿತ್ತರು.)

ಓದುಗರಿಗಾಗಿ
ಪ್ರಿಯ ಓದುಗರೇ,
ಗ್ರಾಮೀಣ ಜೀವನದ ಸಿಹಿ–ಕಹಿ ಅನುಭವಗಳನ್ನು ಹಾಸ್ಯದ ಹೊಳಪಿನಲ್ಲಿ ನಿಮ್ಮ ಮುಂದೆ ತರಲು “ಅರಳಿ ಕಟ್ಟೆ ಮಿತ್ರರು” ನಾಟಕದ ಈ ಪ್ರಸಂಗ ಒಂದು ಮನರಂಜನಾತ್ಮಕ ಪ್ರಯತ್ನವಾಗಿದೆ. ನಮ್ಮ ಸುತ್ತಮುತ್ತ ನಡೆಯುವ ಸಾಮಾನ್ಯ ಘಟನೆಗಳು, ಸ್ನೇಹಿತರ ನಡುವಿನ ಚುಟುಕು ಮಾತುಕತೆಗಳು, ಹಾಗೂ ಸಣ್ಣ ವಿಷಯವೇ ಹೇಗೆ ದೊಡ್ಡ ಗೊಂದಲಕ್ಕೆ ಕಾರಣವಾಗುತ್ತದೆ ಎಂಬುದನ್ನು ಈ ಕಥೆ ನಗುವಿನ ಮೂಲಕ ಹೇಳುತ್ತದೆ.
ಸೋಮ, ಭೀಮ ಮತ್ತು ಚಾಮ ಅವರ ಪಾತ್ರಗಳು ನಮ್ಮ ಊರಿನಲ್ಲೇ ಕಾಣುವ ನೈಸರ್ಗಿಕ ವ್ಯಕ್ತಿತ್ವಗಳ ಪ್ರತಿಬಿಂಬ. ಅವರ ಸಂಭಾಷಣೆಯಲ್ಲಿ ಕಾಣುವ ಸರಳತೆ, ತಪ್ಪು ಅರ್ಥೈಸಿಕೊಳ್ಳುವಿಕೆ, ಹಾಗೂ ಹಾಸ್ಯದ ತಿರುವುಗಳು ನಿಮ್ಮ ಮುಖದಲ್ಲಿ ನಗು ಮೂಡಿಸುವುದರ ಜೊತೆಗೆ ಕ್ಷಣಕಾಲ ಚಿಂತನೆಗೂ ದಾರಿ ಮಾಡಿಕೊಡುತ್ತವೆ. ಈ ನಾಟಕವನ್ನು ಓದುವಾಗ, ನೀವು ಕೇವಲ ನಗುವುದಲ್ಲ, ನಮ್ಮ ಸಮಾಜದಲ್ಲಿ ನಡೆಯುವ ಸಣ್ಣ-ಪುಟ್ಟ ಸಂಗತಿಗಳನ್ನು ಗಮನಿಸುವ ಒಂದು ಹೊಸ ದೃಷ್ಟಿಕೋಣವನ್ನು ಕೂಡ ಪಡೆಯುತ್ತೀರಿ. ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಅಭಿಪ್ರಾಯಗಳು ಇಂತಹ ಇನ್ನಷ್ಟು ಉತ್ತಮ ಕೃತಿಗಳನ್ನು ನಿಮ್ಮ ಮುಂದೆ ತರಲು ನಮ್ಮಿಗೆ ಸ್ಪೂರ್ತಿ ನೀಡುತ್ತವೆ.
ಧನ್ಯವಾದಗಳು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


