ಚಿಕ್ಕನಾಯಕನಹಳ್ಳಿ: ಅನ್ನ ದಾಸೋಹ, ಅಕ್ಷರ ದಾಸೋಹ, ವೇದಾಧ್ಯಯನವನ್ನು ಶುದ್ಧ ಕಾಯಕವನ್ನಾಗಿಸಿಕೊಂಡಿರುವ ಗೋಡೆಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮವನ್ನು ಮೇ 10 ರಂದು ಗೋಡೆಕೆರೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಗೋಡೆಕೆರೆಯ ಪತ್ರಿಕಾಗೋಷ್ಠಿಯಲ್ಲಿ ಬೆಳ್ಳಾವಿ ಕಾರದ ವೀರ ಬಸವ ಮಹಾಸ್ವಾಮಿಗಳು ತಿಳಿಸಿದರು.
ಗುಬ್ಬಿ ತಾಲೂಕು ಗೊಳ್ಳಹಳ್ಳಿ ಶ್ರೀ ಸಿದ್ಧಲಿಂಗೇಶ್ವರ ಮಹಾ ಸಂಸ್ಥಾನದ ವಿಭವ ವಿದ್ಯಾಶಂಕರ್ ದೇಶಿಕೇಂದ್ರ ಸ್ವಾಮಿ ಮಾತನಾಡಿ, ಗುರುವಂದನಾ ಕಾರ್ಯಕ್ರಮದ ಧ್ವಜಾರೋಹಣವನ್ನು ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು ನೆರವೇರಿಸಲಿದ್ದಾರೆ. ನಂತರ ಶ್ರೀ ಗುರು ಸಿದ್ಧರಾಮೇಶ್ವರ ಸ್ವಾಮಿಯವರ ಉತ್ಸವ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸಿದ್ಧೇಹಳ್ಳಿಯ ಇಮ್ಮಡಿ ಕರಿಬಸವ ಸ್ವಾಮಿ, ಕೊಳ ಗುಂದದ ಜಯಚಂದ್ರಶೇಖರ ಸ್ವಾಮಿ, ನಂದಿಗುಡಿಯ ಸಿದ್ಧರಾಮೇಶ್ವರ ಸ್ವಾಮಿ, ಸೀಗೇಗುಡ್ಡದ ನಂದೀಶ್ವರ ಸ್ವಾಮಿ ಸೇರಿದಂತೆ ನಾಡಿನ ಹಿರಿಯ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಕರಡಿಗವಿಮಠದ ಶಿವಶಂಕರ ಶಿವಯೋಗಿ ಸ್ವಾಮಿಗಳು ಮಾತನಾಡುವರು ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ತಾ. ಪಂ. ಮಾಜಿ ಅಧ್ಯಕ್ಷ ಎಂ. ಎಂ. ಜಗದೀಶ್ ಮಾತನಾಡಿ, ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ, ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಗಮಿಸಲಿದ್ದು, ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭದಲ್ಲಿ ಬಿ. ಜೆ. ಪಿ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಜೆ. ಡಿ. ಎಸ್. ಯುವ ಮೋರ್ಚಾ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಮಾಜಿ ಸಚಿವ ಜೆ. ಸಿ. ಮಾಧುಸ್ವಾಮಿ, ತುಮಕೂರು ಶಾಸಕ ಜ್ಯೋತಿ ಗಣೇಶ್ ಗುರುವಂದನಾ ಭಾಷಣ ಮಾಡಲಿದ್ದು, ಮಾಜಿ ಸಂಸದ ಜಿ. ಎಸ್. ಬಸವರಾಜು ಸಮಾರೋಪದ ಅಧ್ಯಕ್ಷತೆ ವಹಿಸುವರು ಎಂದರು.
ಗೋಷ್ಠಿಯಲ್ಲಿ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್ ಮಾತನಾಡಿ, ಈ ಸಮಾರಂಭದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದು, ಮೇ 10 ರಂದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ದಾಸೋಹ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ಜಿ. ಬಿ. ಜಗದೀಶ್ ಉಪಸ್ಥಿತರಿದ್ದರು.
ಕಾಯಕಯೋಗಿ ಮೃತ್ಯುಂಜಯ ಸ್ವಾಮೀಜಿ ಗೋಡೆಕೆರೆ ಗುರು ಸಿದ್ಧರಾಮೇಶ್ವರ ಮಠದ ಚರಪಟ್ಟಾಧ್ಯಕ್ಷರಾಗಿ 40ಕ್ಕೂ ಹೆಚ್ಚಿನ ವರ್ಷಗಳು ಸಂದಿವೆ. ಘಟದಿಂದ ಮಠವನ್ನು ಕಟ್ಟಿದ ಇವರ ಶ್ರಮವನ್ನು ನೆನೆಯುವುದು ಹಾಗೂ ಅವರ ಕಾಯಕ ನಿಷ್ಠೆಯನ್ನು ಸ್ಮರಿಸುವ ಸಲುವಾಗಿ ಮತ್ತು ಅವರು ತಾಲೂಕಿನಲ್ಲಿ ನೀರಾವರಿ, ಪರಿಸರ, ಜನರ ಸ್ವಾಸ್ಥ್ಯವನ್ನು ಬಯಸಿ ಮಾಡಿರುವ ಕಾರ್ಯಗಳನ್ನು ಮೆಚ್ಚಿ ಅವರ ಭಕ್ತ ಸಮೂಹ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
– ಕಾರದ ವೀರ ಬಸವ ಮಹಾಸ್ವಾಮೀಜಿ, ಕಾರದ ಮಠ, ಬೆಳ್ಳಾವಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


