ಚಿಕ್ಕನಾಯಕನಹಳ್ಳಿ: ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ 2026ರ ಆಗಸ್ಟ್ 21, 22 ಮತ್ತು 23 ರಂದು ಮೂರು ದಿನಗಳ ಕಾಲ ‘ಬೃಹತ್ ವಿಶೇಷ ಲೋಕ್ ಅದಾಲತ್’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನ್ಯಾಯಾಧೀಶರಾದ ಸತೀಶ್ ತಿಳಿಸಿದರು.
ಇಲ್ಲಿನ ನ್ಯಾಯಾಲಯದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಏರ್ಪಡಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ನಂತರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಆರ್. ದೇವದಾಸ್ ಅವರು ಸಮಾಧಾನ ಸಮಾರಂಭದ ಕುರಿತು ಅಗತ್ಯ ಮಾರ್ಗದರ್ಶನ ನೀಡಿದರು.
ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಈ ವಿಶೇಷ ಅಭಿಯಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಆಗಸ್ಟ್ 21, 22 ಮತ್ತು 23 ರಂದು ಈ ಬೃಹತ್ ಲೋಕ್ ಅದಾಲತ್ ನಡೆಯಲಿದೆ.
ತಾಲ್ಲೂಕಿನ ಸಾರ್ವಜನಿಕರು ಅಥವಾ ಕಕ್ಷಿದಾರರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಪ್ರಕರಣಗಳನ್ನು ಹೊಂದಿದ್ದರೆ, ಈ ಸದವಕಾಶವನ್ನು ಬಳಸಿಕೊಂಡು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರಕ್ರಿಯೆಗಳ ವಿವರಗಳಿಗಾಗಿ ಕಕ್ಷಿದಾರರು ತಕ್ಷಣವೇ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬೇಕೆಂದು ನ್ಯಾಯಾಧೀಶರಾದ ಸತೀಶ್ ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


