ಹುಳಿಯಾರು: ತುಮಕೂರು ಜಿಲ್ಲೆಯ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಲ್ಲದೆ ತೀವ್ರ ಜಲಕ್ಷಾಮ ಎದುರಾಗಿದ್ದು, ರೈತರು ಹಾಗೂ ಸಾರ್ವಜನಿಕರು ನೀರಿನ ಹನಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯ ಮುನ್ಸೂಚನೆ ಕಾಣದಿರುವುದು ರೈತರ ಆತಂಕವನ್ನು ಇಮ್ಮಡಿಗೊಳಿಸಿದೆ.
ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ರೈತರು ತಮ್ಮ ಅಡಿಕೆ ಮತ್ತು ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.
ಆರಂಭದಲ್ಲಿ 700 ರಿಂದ 900 ರೂಪಾಯಿಗಳಿದ್ದ ಒಂದು ಟ್ಯಾಂಕರ್ ನೀರಿನ ಬೆಲೆ ಈಗ 1,000 ರೂಪಾಯಿಗಳ ಗಡಿ ದಾಟಿದೆ. ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ಟ್ಯಾಂಕರ್ ಮಾಲೀಕರು ನೀರಿಗಾಗಿ ಬೋರನಕಣಿವೆ ಜಲಾಶಯವನ್ನು ಅವಲಂಬಿಸಿದ್ದಾರೆ. ದೂರದ ಪ್ರಯಾಣ ಮತ್ತು ನೀರಿನ ಅಲಭ್ಯತೆಯಿಂದಾಗಿ ದರ ಏರಿಕೆ ಮಾಡಲಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಕೇವಲ ಕೃಷಿಯಷ್ಟೇ ಅಲ್ಲದೆ, ಹೋಬಳಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತೀವ್ರ ಅಭಾವ ಸೃಷ್ಟಿಯಾಗಿದೆ. ಜನರು ಕುಡಿಯುವ ನೀರಿಗಾಗಿ ತೋಟದ ಕೊಳವೆಬಾವಿಗಳು ಅಥವಾ ಟ್ಯಾಂಕರ್ ನೀರನ್ನೇ ಅವಲಂಬಿಸುವಂತಾಗಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ನೀರು ಹರಿಸುತ್ತಿದ್ದರೂ, ಬಿಸಿಲಿನ ಧಗೆಗೆ ಅಡಿಕೆ ಮತ್ತು ತೆಂಗಿನ ಗಿಡಗಳು ಒಣಗುತ್ತಿರುವುದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಸಕಾಲಕ್ಕೆ ಮಳೆಯಾಗದಿದ್ದರೆ ಈ ಭಾಗದ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ನಾಶವಾಗುವ ಭೀತಿ ಎದುರಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


