ತುಮಕೂರು: AIDSOಯು ನಾಡಿನ ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳಿಗೆ ಈ ಮೂಲಕ ಕರೆ ನೀಡುತ್ತಿದೆ. ಪದೇ ಪದೇ ಮರುಕಳಿಸುತ್ತಿರುವ ನೀಟ್ (NEET–UG) ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಒಂದು ಪರೀಕ್ಷಾ ಸಂಸ್ಥೆಯ ವೈಫಲ್ಯವಲ್ಲ; ಇದು ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಬೆವರು ಮತ್ತು ಕನಸುಗಳ ಮೇಲೆ ಎಸಗುತ್ತಿರುವ ಘೋರ ದೌರ್ಜನ್ಯವಾಗಿದೆ. ಕೇವಲ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ, ವೈದ್ಯಕೀಯ ಶಿಕ್ಷಣದ ಕನಸು ಹೊತ್ತವರ ಆಶೋತ್ತರಗಳನ್ನು ಅತಿ ಹೆಚ್ಚು ಹಣ ನೀಡುವವರಿಗೆ ಹರಾಜು ಹಾಕಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) “ಕೋಚಿಂಗ್ ಮಾಫಿಯಾ”ದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಇಡೀ ವ್ಯವಸ್ಥೆಯ ಹದಗೆಟ್ಟ ಸ್ಥಿತಿಯನ್ನು ತೋರಿಸುತ್ತಿದೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಹತಾಶೆಯನ್ನು ಮೂಡಿಸಿದೆ. ಕೇವಲ ಕೆಲವರ ಲಾಭಕ್ಕಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿರುವುದನ್ನು ಖಂಡಿಸುವುದಾಗಿ AIDSO ತಿಳಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ AIDSO ಮುಖಂಡ ಲಕ್ಕಪ್ಪ, ನಮ್ಮ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯವನ್ನೇ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ಬಲಿ ನೀಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಮಾರುಕಟ್ಟೆಯನ್ನಾಗಿ ಮಾಡಿಕೊಂಡಿರುವವರಿಂದ ಇಂತಹ ಸಮಸ್ಯೆಗಳು ಪದೇ ಪದೇ ಹಲವು ಕೇಂದ್ರೀಕೃತ ಪರೀಕ್ಷೆಗಳಲ್ಲಿ ಮರುಕಳಿಸುತ್ತಿವೆ ಎಂದಿದೆ.
NTA ಸಂಸ್ಥೆಯನ್ನು ತಕ್ಷಣವೇ ವಜಾಗೊಳಿಸಿ: ಪಾರದರ್ಶಕವಾಗಿ ಮತ್ತು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ ವಿಫಲವಾಗಿ ದೇಶದ ನಂಬಿಕೆಯನ್ನು ಕಳೆದುಕೊಂಡಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (NTA) ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಇರುವ ವ್ಯಕ್ತಿಗಳು ಮತ್ತು “ಕೋಚಿಂಗ್ ಮಾಫಿಯಾ”ವನ್ನು ಪತ್ತೆಹಚ್ಚಲು ಉನ್ನತ ಮಟ್ಟದ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದೆ.
ಪ್ರವೇಶ ಪರೀಕ್ಷಾ ಪದ್ಧತಿಯನ್ನು ಸಮೂಲಾಗ್ರವಾಗಿ ಬದಲಿಸಿ, ಅದು ಸಾಮಾನ್ಯರಿಗೂ ಲಭ್ಯವಿರುವಂತೆ, ಪಾರದರ್ಶಕವಾಗಿ ಮತ್ತು ಖಾಸಗಿ ವಾಣಿಜ್ಯ ಹಿತಾಸಕ್ತಿಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಈ ಅನ್ಯಾಯದ ವಿರುದ್ಧ ಹೋರಾಡಲು AIDSO ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಶಿಕ್ಷಣ ಪ್ರೇಮಿ ಸಮುದಾಯಕ್ಕೆ ಕರೆ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


