ತುಮಕೂರು: ರಾಜ್ಯ ಸರ್ಕಾರ 3 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮೇ 20ರಂದು ತುಮಕೂರಿನಲ್ಲಿ ರಾಜ್ಯ ಸರ್ಕಾರದ ಬೃಹತ್ ಸಾಧನಾ ಸಮಾವೇಶ ಆಯೋಜಿಸಿದ್ದು, ಇದು ಕೇವಲ ಸಾಧನೆಯ ಸಂಭ್ರಮವಲ್ಲ ಕಳೆದ 3 ವರ್ಷಗಳಲ್ಲಿ ರಾಜ್ಯ ಸರ್ಕಾರ ಮಾಡಿರುವ ಅದ್ಯತಾ ಕಾರ್ಯಕ್ರಮಗಳ ಸಾರ್ಥಕ ಸೇವೆಯ ಸಮರ್ಪಣೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಮಾವೇಶದ ಪೂರ್ವಭಾವಿಯಾಗಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರದ ಉತ್ತರದಾಯಿತ್ವದ ದ್ಯೋತಕವಾಗಿ ಮೇ 20ರಂದು ಬುಧವಾರ ಒಂದೂವರೆ ಲಕ್ಷ ಫಲಾನುಭವಿಗಳಿಗೆ ತುಮಕೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸವಲತ್ತುಗಳನ್ನು ವಿತರಣೆ ಮಾಡಲಾಗುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ಅಗತ್ಯ ಸಿದ್ಧತೆಗಳು ನಡೆಯುತ್ತಿದೆ ಎಂದರು.
ಫಲಾನುಭವಿಗಳನ್ನು ನಡೆದು ಬರುವಂತೆ ಮಾಡಬೇಡಿ:
ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಅವರು ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನಿರ್ವಹಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಮೇ 20ರ ಕಾರ್ಯಕ್ರಮ ಸಾರ್ವಜನಿಕ ಸೇವೆಯ ಸಮರ್ಪಣೆ ಕಾರ್ಯಕ್ರಮ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಂಚಾರಿ ಸಮಸ್ಯೆಯಾಗಲಿ ಅಥವಾ ಇನ್ನಾವುದೇ ಅವ್ಯವಸ್ಥೆಯ ಗೊಂದಲಗಳು ಆಗದಂತೆ ನಿಭಾಯಿಸಬೇಕು. ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿ ಫಲಾನುಭವಿಗಳನ್ನು ಒಂದೇ ಬಸ್ಸಿನಲ್ಲಿ ಕರೆತನ್ನಿ ಎಂದು ತಿಳಿಸಿದರು.
ಇ-ಪೋತಿ ಖಾತೆ: ತುಮಕೂರು ರಾಜ್ಯದಲ್ಲಿ ಮುಂಚೂಣಿ
ಪ್ರಮುಖವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಮ್ಮ ಕೆಲಸಗಳಿಗಾಗಿ ಪದೇ ಪದೇ ಯಾಕೆ ಅಲೆಯಬೇಕು ಮತ್ತು ಅವರು ಅರ್ಜಿ ಕೊಟ್ಟರೂ ಆ ಕೆಲಸಗಳು ಯಾಕೆ ಆಗುತ್ತಿಲ್ಲ ಎಂಬುದರ ಬಗ್ಗೆ ಗಮನಹರಿಸಿತು. ಮೃತ ರೈತರಿಗೆ ಸಂಬಂಧಿಸಿದಂತೆ 39 ಲಕ್ಷ ಪೋತಿ ಖಾತೆ ರಾಜ್ಯದಲ್ಲಿ ಬಾಕಿಯಿತ್ತು. ಕಂದಾಯ ಸಚಿವನಾದ ಮೇಲೆ ಪೋತಿ ಖಾತೆಗೆ ವಿಶೇಷ ಅಭಿಯಾನದ ಮೂಲಕ ಹಳ್ಳಿಹಳ್ಳಿಗೆ ತೆರಳಿ ಇ-ಪೋತಿ ಖಾತೆ ಮಾಡಿಕೊಡುವ ಅಭಿಯಾನ ಆರಂಭಿಸಿ ಸು. 14 ಲಕ್ಷದಷ್ಟು ಪೋತಿ ಖಾತೆಯನ್ನು ಮಾಡಿಕೊಡಲಾಗಿದೆ. ಜಿಲ್ಲೆಯಲ್ಲೂ 1.6 ಲಕ್ಷ ಪೋತಿ ಖಾತೆ ಆಗಿದ್ದು, ಇನ್ನೂ 2 ಲಕ್ಷ ಅರ್ಜಿಗಳು ಬಾಕಿಯಿವೆ.
83 ಕೋಟಿ ಪುಟಗಳಷ್ಟು ಭೂ ದಾಖಲೆಗಳ ಸ್ಕ್ಯಾನ್:
ಕಂದಾಯ ಇಲಾಖೆಯಲ್ಲಿ ದಾಖಲೆಗಳು ಕಾಣೆಯಾಗಿರುವ ಪ್ರಕರಣಗಳ ತಡೆಗೆ ನಮ್ಮ ಸರ್ಕಾರ ಭೂಸುರಕ್ಷಾ ಯೋಜನೆ ಜಾರಿಗೆ ತಂದು ರೈತರು, ಸರ್ಕಾರಕ್ಕೆ ಸಂಬಂಧಿಸಿದ ಮೂಲ ಭೂದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದ್ದು, ಇದುವರೆವಿಗೂ 120 ಕೋಟಿ ವೆಚ್ಚ ಮಾಡಿ 83 ಕೋಟಿ ಪುಟಗಳ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಮುಂದಿನ 4 ತಿಂಗಳೊಳಗಾಗಿ ರಾಜ್ಯಾದ್ಯಂತ ಮೂಲ ದಾಖಲೆಗಳ ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರಿಂದ ನಕಲಿ ದಾಖಲೆಗಳ ಸೃಷ್ಟಿ, ಕಾಣೆಯಾಗುವ ಅಥವಾ ಅರಿದು ಹೋಗುವ ಪ್ರಕರಣಗಳಿಗೆ ಇನ್ನು ಮುಂದೆ ಅವಕಾಶವಿರುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ನ್ಯಾಯಾಲಯದ ಪ್ರಕರಣಗಳ ವಿಲೇವಾರಿ:
ಉಪವಿಭಾಗಾಧಿಕಾರಿಗಳ ನ್ಯಾಯಾಲಯ ವ್ಯಾಪ್ತಿಯಲ್ಲಿ ಬಾಕಿಯಿದ್ದ 73,624 ಅವಧಿ ಮೀರಿದ ಪ್ರಕರಣಗಳನ್ನು ವಿಶೇಷ ಉಪವಿಭಾಗಾಧಿಕಾರಿಗಳ ನಿಯೋಜನೆ ಮೂಲಕ 7,721 ಸಂಖ್ಯೆಗೆ ಇಳಿಸಿದ್ದು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 10,400 ಪ್ರಕರಣ ಬಾಕಿಯಿದ್ದು ಅದು 4,713ಕ್ಕೆ ಇಳಿಕೆಯಾಗಿದೆ. ಬೆಂಗಳೂರಿನ ಡಿಸಿಕೋರ್ಟ್‌ನಲ್ಲಿ 3,000ದಷ್ಟಿದ್ದು, 9 ಜನ ವಿಶೇಷ ಜಿಲ್ಲಾಧಿಕಾರಿಗಳನ್ನು ನಿಯೋಜಿಸಿ ಪ್ರಕರಣ ಇತ್ಯರ್ಥಕ್ಕೆ 6 ತಿಂಗಳ ಗಡುವು ನೀಡಲಾಗಿದೆ ಎಂದರು.
ಸಭೆಯಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


