ಮೈಸೂರು: ಮಲೆ ಮಹದೇಶ್ವರ ಬೆಟ್ಟದ (ಎಂಎಂ ಹಿಲ್ಸ್) ಸಮೀಪದ ನಾಗಮಲೆ ಪ್ರದೇಶದಲ್ಲಿ 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿ, ಆತನ ಸಾವಿಗೆ ಕಾರಣವಾಗಿದ್ದ ನರಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿ ಸೆರೆಹಿಡಿದಿದೆ. ಕಳೆದ 14 ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿದ್ದ ನಿರಂತರ ಹಾಗೂ ತೀವ್ರ ಕಾರ್ಯಾಚರಣೆಯ ಬಳಿಕ ಚಿರತೆ ಬೋನಿಗೆ ಬಿದ್ದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮೃತ ಬಾಲಕನನ್ನು ಬೆಂಗಳೂರಿನ ಲಗ್ಗೆರೆ ನಿವಾಸಿ ಹರ್ಷಿತ್ (10 ವರ್ಷ) ಎಂದು ಗುರುತಿಸಲಾಗಿದೆ. ಮೇ 9ರಂದು ಈತ ತನ್ನ ಕುಟುಂಬದವರೊಂದಿಗೆ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದನು. ದೇವರ ದರ್ಶನದ ಬಳಿಕ ಕುಟುಂಬಸ್ಥರು ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ್ದರು. ಮೇ 10ರಂದು ಬೆಳಿಗ್ಗೆ ನಾಗಮಲೆ ದರ್ಶನಕ್ಕೆ ಇಡೀ ಕುಟುಂಬ ನಡೆದುಕೊಂಡು ಹೋಗುತ್ತಿದ್ದಾಗ, ಪೊದೆಯಲ್ಲಿದ್ದ ಚಿರತೆ ಏಕಾಏಕಿ ಹರ್ಷಿತ್ ಮೇಲೆ ದಾಳಿ ನಡೆಸಿ, ಆತನನ್ನು ಕಾಡಿನೊಳಗೆ ಎಳೆದೊಯ್ದಿತ್ತು. ತಕ್ಷಣವೇ ಹುಡುಕಾಟ ನಡೆಸಿದಾಗ, ಸುಮಾರು ಅರ್ಧ ಗಂಟೆಯ ನಂತರ ಕಾಡಿನ ಬಂಡೆಗಳ ಮಧ್ಯೆ ಬಾಲಕನ ರಕ್ತಸಿಕ್ತ ಶವ ಪತ್ತೆಯಾಗಿತ್ತು.
ಈ ಭೀಕರ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳೀಯರು ಹಾಗೂ ಭಕ್ತರು ಚಿರತೆಯನ್ನು ತಕ್ಷಣವೇ ಸೆರೆಹಿಡಿಯುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದರು. ಘಟನೆಯ ಗಾಂಭೀರ್ಯವನ್ನು ಪರಿಗಣಿಸಿ, ಮುಂಜಾಗ್ರತಾ ಕ್ರಮವಾಗಿ ನಾಗಮಲೆ ಕಡೆಗೆ ತೆರಳುವ ಟ್ರೆಕ್ಕಿಂಗ್ (ಚಾರಣ) ಮತ್ತು ಪಾದಯಾತ್ರೆ ಮಾರ್ಗಗಳಿಗೆ ಅರಣ್ಯ ಇಲಾಖೆ ತಾತ್ಕಾಲಿಕ ನಿರ್ಬಂಧ ಹೇರಿತ್ತು.
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯು ನಾಗಮಲೆ ಸುತ್ತಮುತ್ತಲಿನ ಹಲವೆಡೆ ಸುಸಜ್ಜಿತ ಬೋನುಗಳನ್ನು ಅಳವಡಿಸಿತ್ತು. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಹಗಲಿರುಳು ಕಾವಲು ಕಾಯಲಾಗಿತ್ತು. ಇದೇ ಚಿರತೆಯು ಇತ್ತೀಚಿನ ದಿನಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜಾನುವಾರುಗಳ ಮೇಲೂ ದಾಳಿ ನಡೆಸಿ ಕೊಂದಿರುವ ಶಂಕೆ ವ್ಯಕ್ತವಾಗಿತ್ತು.
ಕೊನೆಗೂ 14 ದಿನಗಳ ಸತತ ಶ್ರಮದ ನಂತರ ಚಿರತೆ ಬೋನಿಗೆ ಬಿದ್ದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


