ತುಮಕೂರು: ರಾಜ್ಯಾದ್ಯಂತ ಜೂನ್ 28 ರಿಂದ ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಅಲೆಮಾರಿ ಜನ ಸಮುದಾಯವನ್ನೂ ಗಮನದಲ್ಲಿಟ್ಟುಕೊಂಡು ಪೂರ್ಣ ಪ್ರಮಾಣದಲ್ಲಿ ಲಸಿಕೆ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಕುರಿತು ಗೂಗಲ್ ಮೀಟಿಂಗ್ ನಡೆಸಿದ ಅವರು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಕ್ರಮವಹಿಸಬೇಕು. ವಿಶೇಷವಾಗಿ ಹೊರರಾಜ್ಯ ಹಾಗೂ ಇತರ ಭಾಗಗಳಿಂದ ಕಟ್ಟಡ ಕಾರ್ಮಿಕರು, ಇನ್ನಿತರ ಕಾರಣಗಳಿಗಾಗಿ ವಲಸೆ ಬಂದಿರುವ ಅಲೆಮಾರಿ ಜನರ ಮಕ್ಕಳಿಗೂ ಲಸಿಕೆ ಹಾಕಲು ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಅಲೆಮಾರಿ ಸಮುದಾಯಗಳು ಬೀಡು ಬಿಟ್ಟಿರುವ ಜಾಗಗಳನ್ನು ಗುರುತಿಸಿ ಲಸಿಕೆ ಕಾರ್ಯಕ್ರಮ ಸಮಯದಲ್ಲಿ ಅವರನ್ನೂ ಒಳಗೊಳ್ಳುವಂತೆ ಮಾಡಬೇಕು. ಜಿಲ್ಲೆಯಲ್ಲಿ ಶೇ.100 ರಷ್ಟು ಲಸಿಕೆ ಕಾರ್ಯ ಪ್ರಗತಿ ಸಾಧಿಸಬೇಕು ಅಂತಾ ಅವರು ಸೂಚನೆ ನೀಡಿದರು.
ಜಿಲ್ಲೆಯ ಸಾಂಕ್ರಾಮಿಕ ರೋಗಗಳ ಮಾಹಿತಿಯಂತೆ, ತುಮಕೂರು ಜಿಲ್ಲೆಯಲ್ಲಿ ಸೆಪ್ಟೆಂಬರ್ 2025 ರಿಂದ ಡಿಸೆಂಬರ್ 2025 ಹಾಗೂ ಜನವರಿ 2026 ರಿಂದ ಏಪ್ರಿಲ್ ಮಾಹೆಯವರೆಗೆ ವಿವಿಧ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡುವ ಮೂಲಕ ಶೇ.95.6 ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳಿಂದ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿರುವುದಿಲ್ಲ ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಗ್ರಹ ಅಧಿಕಾರಿ ರಾಮೇಗೌಡ ಅವರು ಸಭೆಯಲ್ಲಿ ಮಾಹಿತಿ ನೀಡಿದರು.
ಆನೆಕಾಲು ರೋಗ ಸಂಬಂಧಿಸಿದಂತೆ 7 ಪ್ರಕರಣಗಳು ದಾಖಲಾಗಿವೆಯಾದರೂ ರೋಗಿಗಳು ಬೇರೆ ರಾಜ್ಯಗಳಿಂದ ವಲಸೆ ಬಂದವರಾಗಿದ್ದಾರೆ. ಹೊರತಾಗಿ ಕಾಲರಾ, ಮಲೇರಿಯಾ, ಡೆಂಗ್ಯೂ, ಕರುಳುಬೇನೆ ಇತ್ಯಾದಿ ರೋಗವಾಹಕಗಳಿಂದ ಸಾವು ಸಂಭವಿಸಿಲ್ಲ ಎಂದು ಹೇಳಿದರು.
ಸೆಪ್ಟೆಂಬರ್ 2025 ರಿಂದ ಏಪ್ರಿಲ್ 2026ರ ಮಾಹೆಯವರೆಗೆ ಕ್ಷಯರೋಗ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 33,911 ಕಫ ಪರೀಕ್ಷೆಗಳನ್ನು ಮಾಡಲಾಗಿದೆ ಹಾಗೂ 16 ಪ್ರಕರಣಗಳಲ್ಲಿ ಕುಷ್ಠರೋಗ ಪರೀಕ್ಷೆಗಳನ್ನು ಮಾಡಲಾಗಿದೆ. ಎಲ್ಲಾ ಪ್ರಕರಣಗಳಲ್ಲಿ ಶುಶ್ರೂಷೆ ನೀಡಲಾಗಿದೆ.
ನಾಯಿ ಕಡಿತ ವಿಷಯಗಳಲ್ಲಿ ಒಟ್ಟು 9,224 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿರುತ್ತಾರೆ. ಹಾವು ಕಡಿತದ 342 ಪ್ರಕರಣಗಳಲ್ಲಿ 5 ಮಂದಿ ಮೃತಪಟ್ಟಿರುತ್ತಾರೆ. ಉಳಿದಂತೆ ರೋಗಿಗಳು ಶುಶ್ರೂಷೆ ಪಡೆದು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ. ಚಂದ್ರಶೇಖರ್, ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


