ತುಮಕೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗಳು ತೀವ್ರಗೊಂಡಿವೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಸಿಎಂ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅವರಿಗೆ ಅವರ ಪರಮ ದೈವವಾಗಿರುವ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ (ಅಜ್ಜಯ್ಯ) ಅತ್ಯಂತ ಗಂಭೀರ ಮತ್ತು ನಿಗೂಢ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
“ಮಾತು ಆಡಿದರೆ ಮುತ್ತು ಒಡೆದು ಹೋದಂತೆ! ಸದ್ಯಕ್ಕೆ ಮಾಧ್ಯಮಗಳ ಮುಂದೆ ಯಾವುದೇ ಆತುರದ ಹೇಳಿಕೆಗಳನ್ನು ನೀಡಬೇಡಿ. ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಸಂಪೂರ್ಣ ಮೌನವಾಗಿರಿ” ಎಂದು ಅಜ್ಜಯ್ಯನವರು ಡಿ.ಕೆ.ಶಿವಕುಮಾರ್ ಅವರಿಗೆ ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದಾರೆ. ಈಗ ಆಡುವ ಒಂದು ಸಣ್ಣ ಮಾತು ಕೂಡ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗುವಂತೆ ಮಾಡಬಹುದು ಎಂದು ಶ್ರೀಗಳು ಎಚ್ಚರಿಸಿದ್ದಾರೆ.
‘ಸಾಡೇ ಸಾತಿ’ ಶನಿ ದೆಸೆಯ ಗಂಡಾಂತರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯದಲ್ಲೇ ‘ಸಾಡೇ ಸಾತಿ’ ಶನಿ ದೆಸೆ ಆರಂಭವಾಗಲಿದೆ ಎನ್ನಲಾಗಿದೆ. ಈ ಗ್ರಹಗತಿಗಳ ಏರುಪೇರಿನ ಕಾಲದಲ್ಲಿ ಅತ್ಯಂತ ಜಾಗರೂಕರಾಗಿ ಇರಬೇಕು. ಇಲ್ಲದಿದ್ದರೆ ಸಿಎಂ ಕುರ್ಚಿ ಅತ್ಯಂತ ಹತ್ತಿರ ಬಂದರೂ ಕೊನೆಯ ಕ್ಷಣದಲ್ಲಿ ಕೈ ತಪ್ಪುವ ಗಂಡಾಂತರ ಎದುರಾಗಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ನೊಣವಿನಕೆರೆ ಅಜ್ಜಯ್ಯನವರ ಈ ಆಧ್ಯಾತ್ಮಿಕ ಹಾಗೂ ರಾಜಕೀಯ ಸಲಹೆಯ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಮತ್ತು ಅವರ ಆಪ್ತ ವಲಯ ಅಲರ್ಟ್ ಆಗಿದೆ. ಯಾವುದೇ ರೀತಿಯ ವಿಜಯೋತ್ಸವ ಆಚರಿಸದಂತೆ ಹಾಗೂ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಡಿಕೆಶಿ ಬೆಂಬಲಿಗರು ಸಂಪೂರ್ಣ ಸೈಲೆಂಟ್ ಆಗಿದ್ದಾರೆ. ಈ ಮಹತ್ವದ ಎಚ್ಚರಿಕೆಯನ್ನು ನೀಡಿದ ಬಳಿಕ ನೊಣವಿನಕೆರೆ ಶ್ರೀಗಳು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮಠದಿಂದ ಹೊರಟಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಹೊಸ ಸಿಎಂ ಆಯ್ಕೆಯ ಕಸರತ್ತು ಬಿರುಸಿನಿಂದ ನಡೆಯುತ್ತಿರುವ ಬೆನ್ನಲ್ಲೇ ಅಜ್ಜಯ್ಯನವರ ಈ ಭವಿಷ್ಯ ಮತ್ತು ನಡೆ ಇಡೀ ಕೈ ಪಾಳಯದಲ್ಲಿ ಭಾರಿ ಸಂಚಲನ ಹಾಗೂ ಕುತೂಹಲ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


