ತುಮಕೂರು : ವಿಶ್ವ ವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವವು ಇಂದು ಬೆಳಗ್ಗೆ 11-30 ಗಂಟೆಗೆ ಕುಲಪತಿಗಳ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಬಾರಿಯ ಘಟಿಕೋತ್ಸವದಲ್ಲಿ ಒಬ್ಬ ಅಭ್ಯರ್ಥಿ ಡಿ.ಲಿಟ್ ಪದವಿ, 59 ಅಭ್ಯರ್ಥಿಗಳು ಪಿಎಚ್.ಡಿ. ಪದವಿ, 2,058 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8,781 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ (ಒಟ್ಟು 10,839 ಅಭ್ಯರ್ಥಿಗಳು). ವಿಶ್ವವಿದ್ಯಾನಿಲಯವು ಎಲ್ಲ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‍್ಯಾಂಕುಗಳನ್ನು (ಎಂಎಸ್ಸಿ ವಿದ್ಯುನ್ಮಾನ ಮಾಧ್ಯಮ- 2 ರ‍್ಯಾಂಕ್), ಬಿಎ, ಬಿಎಸ್‌ಡಬ್ಲೂ, ಬಿಎಸ್‌ಸಿ, ಬಿಕಾಂ, ಬಿಬಿಎಂ, ಬಿಇಡಿ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ‍್ಯಾಂಕುಗಳನ್ನು (ಬಿಎಸ್ಸಿ ಫ್ಯಾಶನ್ ಅಂಡ್ ಅಪಾರೆಲ್ ಡಿಸೈನಿಂಗ್- 1 ರ‍್ಯಾಂಕ್, ಬಿ.ವೋಕ್ – 3 ರ‍್ಯಾಂಕ್) ಘೋಷಿಸಿದೆ. ಒಟ್ಟು 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕಗಳನ್ನು, ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ವಿಶ್ವ ವಿದ್ಯಾನಿಲಯವು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನಮಾಡಲಿದೆ.
ರಾಜ್ಯಪಾಲರು ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ದೇಬಬ್ರತ ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ . ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ ಹೆಚ್. ಎಸ್., ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯರು ಭಾಗವಹಿಸುವರು.
ಘಟಿಕೋತ್ಸವಕ್ಕೂ ಮುನ್ನ ರಾಜ್ಯಪಾಲರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಗೊಂಡಿರುವ ತುಮಕೂರು ಇನ್ನೋವೇಶನ್ ಇನ್‌ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್ ಹಾಗೂ ಗೋ ಗ್ರೀನ್ – ಬೈಸಿಕಲ್ ಇನೀಶಿಯೇಟಿವ್‌ಗಳನ್ನು ಉದ್ಘಾಟಿಸಲಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


