ತುಮಕೂರು: ಸರ್ಕಾರ ನಿಗದಿಪಡಿಸಿರುವ ಸುತ್ತೋಲೆ ಆದೇಶವನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವ ಹಿನ್ನೆಲೆಯಲ್ಲಿ ಓರ್ವ ರಾಜಸ್ವ ನಿರೀಕ್ಷಕರು ಹಾಗೂ ಮೂವರು ಗ್ರಾಮ ಆಡಳಿತಾಧಿಕಾರಿಗಳಿಗೆ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಅವರು ಸೂಚನಾ ಪತ್ರ ರವಾನಿಸಿದ್ದಾರೆ.
ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳ ಶಿಷ್ಟಾಚಾರ ಪಾಲನೆ ಮಾಡುವುದು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರ ಕರ್ತವ್ಯವಾಗಿರುತ್ತದೆ. ಆದರೆ, ಈ ತಾಲ್ಲೂಕಿನಲ್ಲಿ ತಹಸಿಲ್ದಾರ್ ಅವರ ಶಿಷ್ಟಾಚಾರವನ್ನು ಕಸಬಾ ಹೋಬಳಿ ಟೌನ್ ವ್ಯಾಪ್ತಿಗೆ ಸೇರುವ ಗ್ರಾಮ ಆಡಳಿತಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ಪಾಲನೆ ಮಾಡದೆ ಸರ್ಕಾರದ ಸುತ್ತೋಲೆಯನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದಾರೆ. ಶಿಷ್ಟಾಚಾರ ಪಾಲನೆ ಮಾಡುವ ಬಗ್ಗೆ ಈಗಾಗಲೇ ಸಭೆಗಳಲ್ಲಿ ಸೂಚಿಸಿದ್ದರೂ ಸಹ ಕ್ರಮ ವಹಿಸಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಆದಕಾರಣ, ಕೆಳಕಂಡ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ಪ್ರತಿನಿತ್ಯ ಬೆಳಗ್ಗೆ 9.30ಕ್ಕೆ ತಾಲ್ಲೂಕು ಕಚೇರಿಗೆ ಹಾಜರಾಗಿ ತಹಶೀಲ್ದಾರ್ ಅವರನ್ನು ಭೇಟಿ ಮಾಡುವುದು ಮತ್ತು ಸಂಜೆ 6ಗಂಟೆಗೆ ತಾಲ್ಲೂಕು ಕಚೇರಿಯಲ್ಲಿ ತಹಸಿಲ್ದಾರ್ ಅವರನ್ನು ಭೇಟಿ ಮಾಡಲು ಸೂಚಿಸಲಾಗಿದೆ. ಇದರ ಮೇಲ್ವಿಚಾರಣೆ ನಡೆಸಲು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರಿಗೆ ತಿಳಿಸಲಾಗಿದೆ.
ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಲೋಕೇಶ್ ಹೆಚ್.ಟಿ., ಮೇಲನಹಳ್ಳಿ ವೃತ್ತ ಗ್ರಾಮ ಆಡಳಿತಾಧಿಕಾರಿ ದೇವರಾಜು ಕೆ.ಆರ್., ಮಾಳಿಗೆಹಳ್ಳಿ ವೃತ್ತದ ಮರುಳಸಿದ್ದನಗೌಡ, ಜೋಗಿಹಳ್ಳಿ ವೃತ್ತದ ಆಲೂರು ಅಶೋಕ್ ಅವರುಗಳಿಗೆ ಈ ಸೂಚನೆ ನೀಡಲಾಗಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಬಹಳಷ್ಟು ವರ್ಷಗಳಿಂದ ಕೆಲವರು ಉದಾಸೀನದ ಧೋರಣೆಯಲ್ಲಿಯೇ ಇದ್ದು, ಸಾರ್ವಜನಿಕರ ಕೆಲಸ ಕಾರ್ಯಗಳ ಬಗ್ಗೆ ಅಸಡ್ಡೆ ತೋರುತ್ತಾ ಬಂದಿರುತ್ತಾರೆ. ಸಾರ್ವಜನಿಕರು ದೂರು ಅರ್ಜಿಗಳನ್ನು ನೀಡಿದರೂ ಅದಕ್ಕೆ ಸರಿಯಾದ ಸ್ಪಂದನೆ ಇರುವುದಿಲ್ಲ. ಕಚೇರಿಯಲ್ಲಿ ಕೆಲವರು ಪ್ರಾಮಾಣಿಕ ಅಧಿಕಾರಿ ಮತ್ತು ನೌಕರ ವರ್ಗದವರಿದ್ದು, ಕೆಲವು ನೌಕರರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂಬ ಅಪವಾದಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


