ತುಮಕೂರು: ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹಿಸಿ, ಗ್ರಾಮಸ್ಥರು ಹಾಗೂ ಪೋಷಕರು AIDSO ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಮೇಲ್ವಿಚಾರಕರ ಮೂಲಕ ಡಿಡಿಪಿಐಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸಿರುವಂತೆ ಜೂನ್ ನಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗಿದೆ. ಈ ಶಾಲೆಗಳ 3ರಿಂದ 5 ಕಿ.ಮೀ. ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸಲಾಗುವುದೆಂದು 15 ಅಕ್ಟೋಬರ್ 2025ರ ಆದೇಶವು ತಿಳಿಸುತ್ತದೆ. ಈ ಕುರಿತು ಪಟ್ಟಿ ಕೂಡ ದೊರೆತಿದೆ. ನಮ್ಮೂರ ಶಾಲೆ ಉಳಿಯಬೇಕು ಮತ್ತು ಕೆಪಿಎಸ್ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿ ಎಐಡಿಎಸ್ ಓ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದೆ. ಗ್ರಾಮ ಮಟ್ಟದಿಂದ ಆರಂಭಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ವರೆಗೂ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಲಾಗಿದೆ. ಜನಗಳ ತೀವ್ರ ವಿರೋಧದ ನಡುವೆಯೂ ಜನ ವಿರೋಧಿ ಕೆಪಿಎಸ್ ಮ್ಯಾಗ್ನೆಟ್ ನೀತಿಯನ್ನು ಜಾರಿಗೆ ತರುತ್ತಿರುವುದು ಖಂಡನೀಯ ಎಂದರು.
ಕುಂಕುಮನಹಳ್ಳಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ನರಸಿಂಹರಾಜು ಮಾತನಾಡಿ, ನಮ್ಮೂರ ಶಾಲೆ ನಮ್ಮೂರ ಮಕ್ಕಳ ಜ್ಞಾನದ ಮಂದಿರವಾಗಿದೆ. ನಮ್ಮೂರ ಶಾಲೆಯನ್ನು ಮುಚ್ಚಲು/ವಿಲೀನಗೊಳಿಸಲು ನಮ್ಮ ಒಪ್ಪಿಗೆಯಿಲ್ಲ. ನಮ್ಮೂರ ಶಾಲೆಗೆ ಸಮರ್ಪಕ ಸೌಲಭ್ಯ ಹಾಗೂ ಶಿಕ್ಷಕರನ್ನು ನೀಡಿ ಅಭಿವೃದ್ಧಿ ಪಡಿಸಬೇಕೆಂಬುದು ನಮ್ಮೆಲ್ಲರ ಒಕ್ಕೊರಲ ಆಗ್ರಹವಾಗಿದೆ. ಯಾವುದೇ ಕಾರಣಕ್ಕೂ ನಮ್ಮೂರ ಮುಚ್ಚಬಾರದೆಂದು ಆಗ್ರಹಿಸುತ್ತೇವೆ ಎಂದು ಒತ್ತಾಯಿಸಿದರು.
ಬೇಡಿಕೆಗಳು:
* ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡೆಯಿರಿ.
* ನಮ್ಮೂರ ಶಾಲೆ ವಿಲೀನ ಕೈಬಿಡಿ.
* ನಮ್ಮೂರ ಶಾಲೆಗೆ ಸಮರ್ಪಕ ಸೌಲಭ್ಯ ನೀಡಿ ಬಲ ಪಡಿಸಿ.
* ಕನ್ನಡ ಮಾಧ್ಯಮವನ್ನು ಉಳಿಸಿ. ಇಂಗ್ಲಿಷ್ ಮಾಧ್ಯಮಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕ ಮಾಡಿಕೊಳ್ಳಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


