ತಿಪಟೂರು: ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ದೀನದಯಾಳು ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ನಮ್ರತಾ ಆಯಿಲ್ ಮತ್ತು ಬೆಂಗಳೂರಿನ ವಿ.ಎಸ್.ಕೆ. ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೋಟ್ಬುಕ್ ಹಾಗೂ ಲೇಖನಿ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ಶಾಸಕ ಕೆ. ಷಡಕ್ಷರಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ಕೆ. ಷಡಕ್ಷರಿ ಅವರು, “ವಿ.ಎಸ್.ಕೆ. ಫೌಂಡೇಶನ್ ಸಂಸ್ಥೆಯು ಮಾಡುತ್ತಿರುವ ಇಂತಹ ಸಮಾಜ ಸೇವೆಗಳು ಅತ್ಯಂತ ಶ್ಲಾಘನೀಯ. ಇವರ ಸಾಮಾಜಿಕ ಕಾರ್ಯಗಳು ನಿರಂತರವಾಗಿ ಮತ್ತು ಶಾಶ್ವತವಾಗಿ ಮುಂದುವರಿಯಲಿ” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ (BEO) ತಾರಾಮಣಿ ಅವರು ಮಾತನಾಡಿ, “ಯಾವುದೇ ವಿಷಯವಾಗಲಿ, ಕೇವಲ ಓದಿ ಕಲಿಯುವುದಕ್ಕಿಂತ ಬರೆದು ಕಲಿಯುವ ವಿದ್ಯೆ ತಲೆಯಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಸಾಮಾಜಿಕ ಸಂಘ ಸಂಸ್ಥೆಗಳು ಶಾಲಾ ಮಕ್ಕಳಿಗೆ ಈ ರೀತಿ ಉಚಿತವಾಗಿ ನೋಟ್ ಬುಕ್ ವಿತರಿಸುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಕ್ತಗತವಾಗಿ ಬಂದಿರುವ ದಾನ ಗುಣವನ್ನು ತೋರಿಸುತ್ತದೆ” ಎಂದರು.
ವಿ.ಎಸ್.ಕೆ. ಫೌಂಡೇಶನ್ ಕಾರ್ಯದರ್ಶಿ ಗಿರೀಶ್ ಮಾತನಾಡಿ, “ನಮ್ಮ ಆಲೋಚನೆ ಮತ್ತು ವಿಚಾರಗಳನ್ನು ಬದಲಾಯಿಸಿ ನೋಡಿದರೆ ಇಡೀ ದೇಶವೇ ಬದಲಾಗುತ್ತದೆ. ಮಕ್ಕಳು ಚೆನ್ನಾಗಿ ಓದಿದರೆ ಅವರ ಭವಿಷ್ಯದ ಜೀವನವೇ ಹಸನಾಗುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗುವ ಸದಾಶಯದೊಂದಿಗೆ ಕಳೆದ 18 ವರ್ಷಗಳಿಂದ ನಿರಂತರವಾಗಿ ಉಚಿತ ನೋಟ್ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ನೀಡುವ ಕಾಯಕವನ್ನು ನಾವು ಮಾಡಿಕೊಂಡು ಬರುತ್ತಿದ್ದೇವೆ” ಎಂದು ತಿಳಿಸಿದರು.
ಈ ಉದಾತ್ತ ಕಾರ್ಯಕ್ರಮದಲ್ಲಿ ನಮ್ರತಾ ಆಯಿಲ್ಸ್ನ ಎಸ್. ಶಿವಪ್ರಸಾದ್, ವಿ.ಎಸ್.ಕೆ ಫೌಂಡೇಶನ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರಾಜೇಶ್, ಕಿಶೋರ್, ಶಾಮಲಾ, ವೀಣಾ ಹಾಗೂ ಶಾಲಾ ಎಸ್ಡಿಎಂಸಿ (SDMC) ಅಧ್ಯಕ್ಷ ಮಂಜುನಾಥ್ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


