ತುಮಕೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ವಿಚಾರವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಶಾಸಕರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಗ್ರಾಮಾಂತರ ಘಟಕದ ವತಿಯಿಂದ ಬುಧವಾರ ತುಮಕೂರು ನಗರದ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿ ಶಾಸಕ ಅಡ್ಡಮತದಾನ ಮಾಡಿದ್ದಾರೆ ಎಂಬ ಆರೋಪದೊಂದಿಗೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಗೌರಿಶಂಕರ್ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿರುವುದು ಖಂಡನೀಯ ಎಂದ ಬಿಜೆಪಿ ಮುಖಂಡರು, ಗ್ರಾಮಾಂತರ ಕಾರ್ಯಕರ್ತರು, ಇಂತಹ ಸುಳ್ಳು ಮಾಹಿತಿಗಳ ಮೂಲಕ ರಾಜಕೀಯ ದ್ವೇಷ ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಜಿಲ್ಲೆಯ ಬಿಜೆಪಿ ಶಾಸಕ ಯಾರು ಗೊತ್ತೇ? ಗೊತ್ತಿದ್ದರೆ ಕಾಮೆಂಟ್ ಮಾಡಿ ಎಂಬ ರೀತಿಯ ಪೋಸ್ಟ್ಗಳನ್ನು ಪ್ರಕಟಿಸಿರುವ ಸುರೇಶ್ ಮುದ್ದಪ್ಪ ಹಾಗೂ ವಿನು ವಿನೋದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದೇ ಪೋಸ್ಟ್ ಗಳನ್ನು ವಿವಿಧ ವಾಟ್ಸಾಪ್ ಗುಂಪುಗಳಿಗೆ ರವಾನಿಸಿರುವ ಯುವ ಕಾಂಗ್ರೆಸ್ ಮುಖಂಡ ಪ್ರದೀಪ್ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬುಧವಾರ ನಡೆದ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಗ್ರಾಮಾಂತರ ಕಾರ್ಯಕರ್ತರು ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ, ಗ್ರಾಮಾಂತರ ವಿಭಾಗದ ಅಧ್ಯಕ್ಷ ಎಂ.ಪಿ. ರಾಜಶೇಖರ್, ಮುಖಂಡರಾದ ಪ್ರಭಾಕರ್, ಉಮೇಶ್ ಗೌಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಗೌರಿಶಂಕರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನಾಕಾರರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗೋಪಾಲ್ ಹಾಗೂ ಪುರುಷೋತ್ತಮ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಬಿಜೆಪಿ ಶಾಸಕ ಸುರೇಶ್ ಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಉಮೇಶ್ಗೌಡ, ಪ್ರಭಾಕರ್ ಮತ್ತಿತರರು ಮಾಜಿ ಶಾಸಕ ಗೌರಿಶಂಕರ್ ಅವರ ಕುಮ್ಮಕ್ಕಿನಿಂದಲೇ ಅವರ ಬೆಂಬಲಿಗರು ಇಂತಹ ಸುಳ್ಳು ಪೋಸ್ಟ್ಗಳನ್ನು ಹಾಕಿ ಸಮಾಜದಲ್ಲಿ ಗೊಂದಲ ಮತ್ತು ಉದ್ವಿಗ್ನತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆಧಾರರಹಿತ ಆರೋಪಗಳ ಮೂಲಕ ಬಿಜೆಪಿ ಶಾಸಕ ಸುರೇಶ್ ಗೌಡ ಅವರ ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ವೈ.ಹೆಚ್.ಹುಚ್ಚಯ್ಯ ಹೇಳಿದರು.
ಬಿಜೆಪಿ ಆರೋಪ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರು ಅಡ್ಡ ಮತದಾನ ಸಂಬಂಧ ಪೋಸ್ಟರ್ವಾರ್ ರಾಜ್ಯಾದ್ಯಂತ ನಡೆಯುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳೋದೇಕೆ? ಹಾಗೆ ನಡೆದಿಲ್ಲದಿದ್ದರೆ ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿ ಸ್ಪಷ್ಟಿಕರಣ ನೀಡಬೇಕು. ಬದಲಾಗಿ ಧಮ್ಕಿ ಹಾಕುತ್ತು, ನಾಯಿಗಳು ಎಂದು ನಾಲಿಗೆ ಹರಿಬಿಡುವುದು, ಕಾರ್ಯಕರ್ತರಿಗೆ ಧಮ್ಕಿ ಹಾಕುವುದು ಸರಿಯಲ್ಲ. ಪೊಲೀಸರ ತನಿಖೆಗೆ ನಾವು ಸಿದ್ಧ. ಜನ ಕೇಳುತ್ತಿರುವ ಪ್ರಶ್ನೆಗೆ ಜನಪ್ರತಿನಿಧಿಯಾಗಿ ಮೊದಲು ಉತ್ತರ ಕೊಡಿ ಎಂದು ಗ್ರಾಮಾಂತರ ಶಾಸಕರಿಗೆ ಸವಾಲುಹಾಕಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




