ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ನೀರಿಗಾಗಿ ತೀವ್ರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ದಲಿತರ ಓಣಿಯಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಣಿಯಲ್ಲಿ ಎರಡು ಹ್ಯಾಂಡ್ ಪಂಪ್, ಮೂರು ಬೋರ್‌ವೆಲ್ ಹಾಗೂ ಒಂದು ಬಾವಿ ಇದ್ದರೂ ಸಹ ಸದ್ಯಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನೀರಿಲ್ಲದೆ ದೈನಂದಿನ ಕಾರ್ಯಗಳಿಗೆ ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ.
ಈ ಕುರಿತು ಗ್ರಾಮದ ಪ್ರಮುಖರಾದ ಪ್ರಭಾಕರ್ ಇಂಗಳೇ ಹಾಗೂ ಶಾಶ್ವತಿ ಮಾಳೆಗೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಕನಿಷ್ಠ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ಅವರು ದೂರಿದ್ದಾರೆ.
ಸಮಸ್ಯೆ ಉಲ್ಬಣಗೊಂಡಿರುವುದರಿಂದ ಜಿಲ್ಲಾ ಪಂಚಾಯತ್ ಸಿಇಒ ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕರ್ತವ್ಯ ಲೋಪ ಎಸಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಔರಾದ್ ಕ್ಷೇತ್ರದ ಶಾಸಕರಾದ ಪ್ರಭು ಚೌವ್ಹಾಣ್ ಅವರು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಬೆಳಕುಣಿ ಚೌದ್ರಿ ಗ್ರಾಮದ ದಲಿತರ ಓಣಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಪ್ರಭಾಕರ್ ಇಂಗಳೇ ಮತ್ತು ಶಾಶ್ವತಿ ಮಾಳೆಗೆ ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



