ಸರಗೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯ ವತಿಯಿಂದ ಜುಲೈ 3ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ (ಫ್ರೀಡಂ ಪಾರ್ಕ್) ಹಮ್ಮಿಕೊಳ್ಳಲಾಗಿರುವ ‘ದಲಿತ ಜನಾಗ್ರಹ ಸಮಾವೇಶ’ದ ಪೋಸ್ಟರ್ ಅನ್ನು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು. ಆದಿಕರ್ನಾಟಕ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಂಟಿಯಾಗಿ ಪೋಸ್ಟರ್ ಬಿಡುಗಡೆ ಮಾಡಿ, ಸಮಾವೇಶದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ನೀಡಿದರು.
ಈ ಸಮಾವೇಶಕ್ಕೆ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಿಂದ ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ತೆರಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಆದಿಕರ್ನಾಟಕ ಮಹಾಸಭಾ ಅಧ್ಯಕ್ಷರಾದ ಸರಗೂರು ಶಿವಣ್ಣ, “ದಲಿತ ಸಮುದಾಯಕ್ಕೆ ಸಿಗಬೇಕಾಗಿರುವ ಸರ್ಕಾರಿ ಅಗತ್ಯ ಸೌಲಭ್ಯಗಳಾದ ಭೂಮಿ, ವಸತಿ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜುಲೈ 3ರಂದು ಬೆಂಗಳೂರಿನಲ್ಲಿ ಈ ಬೃಹತ್ ಜನಾಗ್ರಹ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ,” ಎಂದು ವಿವರಿಸಿದರು.
ದಸಂಸ (ಅಂಬೇಡ್ಕರ್ ವಾದ) ಸಮಿತಿಯ ತಾಲ್ಲೂಕು ಸಂಚಾಲಕರಾದ ಕೂಡಗಿ ಗೋವಿಂದರಾಜು ಮಾತನಾಡಿ, “ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಅನುದಾನವನ್ನು ನಿಯಮಬಾಹಿರವಾಗಿ ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ಉದ್ಯೋಗ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆಗಳ ಸಮರ್ಪಕ ಅನುಷ್ಠಾನ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಈ ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಆದ್ದರಿಂದ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕು,” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ಸಂಘಟನೆಯ ಸಂಚಾಲಕರಾದ ಹಾದನೂರು ಚಂದ್ರ, ಕುರ್ಣೇಗಾಲ ಕೃಷ್ಣ, ಚಂಗೌಡನಹುಂಡಿ ಶಿವರಾಜು, ಕೂಲ್ಯ ಮಹದೇವಸ್ವಾಮಿ ಹಾಗೂ ಮುಖಂಡರಾದ ಜಿ. ಗೋಪಾಲಸ್ವಾಮಿ, ಚನ್ನೀಪುರ ಮಲ್ಲೇಶ್, ಎಸ್.ಡಿ. ಸಣ್ಣಸ್ವಾಮಿ, ಮುಳ್ಳೂರು ಮಂಜು, ಹುನಗಹಳ್ಳಿ ಗೋವಿಂದ, ಅಣ್ಣಯ್ಯಸ್ವಾಮಿ, ರಾಜೇಶ್, ರವಿಕುಮಾರ್, ಪುಟ್ಟು ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




