ಮಧುಗಿರಿ: ತಾಲ್ಲೂಕು ಮಾದರ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಯಾವುದೇ ಮುನ್ಸೂಚನೆ ಅಥವಾ ಕಾರಣ ನೀಡದೆ ಏಕಾಏಕಿ ವಜಾಗೊಳಿಸಿರುವುದಕ್ಕೆ ವಕೀಲ ಹಾಗೂ ಮುಖಂಡ ಬಾಣದ ರಂಗಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಲೂಕು ಅಧ್ಯಕ್ಷ ಗೋಪಾಲಯ್ಯ ಅವರ ಈ ಕ್ರಮ ಕಾನೂನು ಬಾಹಿರವಾಗಿದ್ದು, ಅವರನ್ನೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಪಟ್ಟಣದ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಣದ ರಂಗಯ್ಯ, “ವಿದ್ಯಾವಂತರ ಕೂಟ ಕಟ್ಟಿಕೊಂಡು, ತಾಲ್ಲೂಕಿನ ಮಾದಿಗ ಜನಾಂಗದ ಅಭಿವೃದ್ಧಿಗಾಗಿ ನಾವೆಲ್ಲಾ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ. ಆದರೆ, ಬೇರೆ ಕಡೆಯಿಂದ ಬಂದಿರುವ ಅಧ್ಯಕ್ಷ ಗೋಪಾಲಯ್ಯ ಮತ್ತು ಅವರ ಬೆಂಬಲಿಗರು ಸಮಾಜವನ್ನು ಒಡೆದು ಹೋಳು ಮಾಡುತ್ತಿದ್ದಾರೆ” ಎಂದು ಗಂಭೀರವಾಗಿ ಆರೋಪಿಸಿದರು.
ಬೈಲಾ ಉಲ್ಲಂಘನೆ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ
“ವಾಸ್ತವವಾಗಿ ಸಭೆಯಲ್ಲಿ ಶೇ. 75 ರಷ್ಟು ಸದಸ್ಯರು ನನ್ನ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದರು. ಆದರೆ ಬೈಲಾ ಉಲ್ಲಂಘಿಸಿ ಗೋಪಾಲಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಆದರೂ ಸಮಾಜದ ಒಳಿತಿಗಾಗಿ ನಾನು ಪ್ರಧಾನ ಕಾರ್ಯದರ್ಶಿ ಹುದ್ದೆ ಒಪ್ಪಿಕೊಂಡು ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದೆ. ಈಗ ಸೌಜನ್ಯಕ್ಕೂ ಮಾಹಿತಿ ನೀಡದೆ, ನೋಟಿಸ್ ಕೊಡದೆ ನನ್ನನ್ನು ವಜಾಗೊಳಿಸಿ ಶಿವಣ್ಣ ಎಂಬುವವರನ್ನು ನೇಮಕ ಮಾಡಿರುವುದು ಕಾನೂನು ಬಾಹಿರ. ಪ್ರಸ್ತುತ ಆಯ್ಕೆಯಾಗಿರುವವರು ಎಷ್ಟು ಸದಸ್ಯರನ್ನು ನೋಂದಣಿ ಮಾಡಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ,” ಎಂದು ರಂಗಯ್ಯ ಸವಾಲು ಹಾಕಿದರು. ಜೊತೆಗೆ, ಜಿಲ್ಲಾಧ್ಯಕ್ಷ ವೈ.ಎನ್. ಹುಚ್ಚಯ್ಯ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಈ ಗೊಂದಲವನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಕೊಲೆ ಬೆದರಿಕೆ ದೂರು: “ಬಾಣದ ರಂಗಯ್ಯನವರನ್ನು ಏಕಾಏಕಿ ತೆಗೆದುಹಾಕಿರುವುದನ್ನು ವಿರೋಧಿಸಿದ್ದಕ್ಕೆ, ಹಿಂಬಾಗಿಲಿನಿಂದ ಬಂದವರು ನನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.”
— ವಕೀಲ ನರಸಿಂಹಮೂರ್ತಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ
ಬೆಂಗಳೂರಿಂದ ಬಂದು ಸಮಾಜ ಒಡೆಯಬೇಡಿ: ಮುಖಂಡರ ಆಕ್ರೋಶ
ಮಾತಂಗ ಸಭಾ ಹಾಗೂ ಕಾಂಗ್ರೆಸ್ ಎಸ್ಸಿ ಘಟಕದ ತಾಲ್ಲೂಕು ಅಧ್ಯಕ್ಷ ಸಣ್ಣರಾಮಯ್ಯ ಮಾತನಾಡಿ, ಬೈಲಾ ಉಲ್ಲಂಘಿಸಿ ನಡೆಸಿರುವ ಗೋಪಾಲಯ್ಯ ಅವರ ಆಯ್ಕೆಯನ್ನು ನಾವೆಲ್ಲರೂ ವಿರೋಧಿಸುತ್ತೇವೆ. ಸಮಾಜದ ಹಿತದೃಷ್ಟಿಯಿಂದ ಅಧ್ಯಕ್ಷರನ್ನು ಬದಲಾಯಿಸಲೇಬೇಕು ಎಂದರು.
ತಾ.ಪಂ ಮಾಜಿ ಸದಸ್ಯ ಸಿದ್ದಗಂಗಪ್ಪ ಮಾತನಾಡಿ, “ಇದು ಸಮಾಜದ ಆಯ್ಕೆಯಲ್ಲ, ಇದೊಂದು ರಾಜಕೀಯ ಪ್ರೇರಿತ ‘ಮ್ಯಾಚ್ ಫಿಕ್ಸಿಂಗ್’ ಆಯ್ಕೆಯಾಗಿದೆ. ನಾವು ಇಲ್ಲೇ ಇದ್ದು ಹಗಲಿರುಳು ಕೆಲಸ ಮಾಡುವವರು. ನೀವು ಬೆಂಗಳೂರಿನಿಂದ ಬಂದು ಇಲ್ಲಿ ಏನು ಮಾಡುತ್ತೀರಿ? ರಾಜ್ಯ ಸಮಿತಿಯವರು ತಾಲೂಕಿನಲ್ಲಿ ಸರ್ವೆ ನಡೆಸಿ, ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಿ,” ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹಾರಾಜು (ದಸಾಪ ಅಧ್ಯಕ್ಷ), ಮಂಜುನಾಥ್ (ಗ್ರಾ.ಪಂ ಮಾಜಿ ಅಧ್ಯಕ್ಷ), ಲಿಂಗರಾಜು, ತಿಪ್ಪಾಪುರ ಮೈಲಾರಪ್ಪ, ಎಸ್.ಕೆ. ರಂಗನಾಥ್, ಮೂರ್ತಿ, ಶ್ರೀಧರ್, ಹನುಮಂತರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


