ತುಮಕೂರು: ಕರ್ತವ್ಯದ ಒತ್ತಡಕ್ಕೆ ಸಿಲುಕಿ ಬೆಳ್ಳಂಬೆಳಗ್ಗೆಯೇ ಕೆಲಸಕ್ಕೆ ಹೊರಟಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ (VA) ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವ ಮನಕಲಕುವ ಘಟನೆ ಶನಿವಾರ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಎಸ್ ಐಆರ್ (SIR) ಕೆಲಸದ ಭರದಲ್ಲಿ ಜೀವ ಕಳೆದುಕೊಂಡ ನೌಕರಳ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಸಹೋದ್ಯೋಗಿಗಳು ಹಾಗೂ ಪೋಷಕರು ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಮೃತ ಮಹಿಳಾ ನೌಕರರನ್ನು ಗೂಳೂರು ಕಂದಾಯ ವೃತ್ತದ ಗ್ರಾಮ ಲೆಕ್ಕಿಗರಾದ ಭುವನಾ (26) ಎಂದು ಗುರುತಿಸಲಾಗಿದೆ. ಭುವನಾ ಅವರು ನೆಲಮಂಗಲದ ಟಿ.ಬೇಗೂರಿನ ವರದನಾಯಕನಪಾಳ್ಯದ ನಿವಾಸಿಯಾಗಿದ್ದು, ಶುಕ್ರವಾರ ಮುಂಜಾನೆ 5.45ಕ್ಕೆ ಮನೆಯಿಂದ ಹೊರಟು ತುಮಕೂರು ಬಸ್ ನಿಲ್ದಾಣ ತಲುಪಿದ್ದರು. ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ತಮ್ಮ ಕರ್ತವ್ಯದ ಸ್ಥಳವಾದ ಗೂಳೂರಿಗೆ ಎಸ್ ಐಆರ್ ಕಾರ್ಯಕ್ಕಾಗಿ 7.35ರ ಸಮಯದಲ್ಲಿ ತೆರಳುತ್ತಿದ್ದರು.
ಗೂಳೂರು ರಸ್ತೆಯ ಬೇವಿನ ಮರದಮ್ಮ ಗುಡಿ ಬಳಿ ಬರುತ್ತಿದ್ದಂತೆ ವೇಗವಾಗಿ ಬಂದ ತಮಿಳುನಾಡು ಮೂಲದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಭುವನಾ ಅವರ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣವೇ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಭುವನಾ ಅವರಿಗೆ ಭಾನುವಾರ (ಇಂದು) ವರನ ಕಡೆಯವರಿಂದ ಎದುರುಗೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತು. ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನವೇ ಅವರು ಸಾವನ್ನಪ್ಪಿರುವುದು ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಮುರುಗನ್ (50) ಎಂಬಾತನನ್ನು ಗ್ರಾಮಾಂತರ ಪೊಲೀಸರು ಬಂಧಿಸಿ, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
“ಟಾರ್ಗೆಟ್” ಆಸೆಗೆ ಬಲಿಯಾದರೇ ನೌಕರರು?
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಹಾಗೂ ಇತರೆ ಇಲಾಖೆಯ ನೌಕರರು ಸಿದ್ದಗಂಗಾ ಆಸ್ಪತ್ರೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ತುಮಕೂರು ಜಿಲ್ಲೆಯನ್ನು ಎಸ್ ಐಆರ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತರಬೇಕೆಂಬ ಹಠಕ್ಕೆ ಬಿದ್ದು, ಮೇಲಾಧಿಕಾರಿಗಳು ನೌಕರರ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದ್ದಾರೆ.
ಪೋಷಕರ ಆಕ್ರೋಶ: ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ವಿರುದ್ಧ ಭುವನಾ ಅವರ ಪೋಷಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “ರಾತ್ರಿ 10 ಗಂಟೆಯವರೆಗೂ ಮೀಟಿಂಗ್ ಮಾಡುತ್ತೀರಾ, ಮತ್ತೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಕರೆಯುತ್ತೀರಾ? ನಿಮ್ಮ ರ‍್ಯಾಂಕಿಂಗ್ ಆಸೆಗೆ ನಮ್ಮ ಮಕ್ಕಳ ಬಲಿ ತೆಗೆದುಕೊಳ್ಳುತ್ತೀರಾ?” ಎಂದು ದುಃಖ ತಡೆಯಲಾರದೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಡಿಸಿ ಕಚೇರಿ ಮೆಟ್ಟಿಲುಗಳ ಬಳಿ ಧರಣಿ ಕುಳಿತ ನೌಕರರು, “ಎಸ್ ಐಆರ್ ಮನೆ ಮನೆ ಭೇಟಿಗೆ ಜುಲೈ 29ರವರೆಗೂ ಸಮಯಾವಕಾಶವಿದೆ. ಅಂತಿಮ ಪಟ್ಟಿ ಪ್ರಕಟವಾಗುವುದು ಅಕ್ಟೋಬರ್ ನಲ್ಲಿ. ಹೀಗಿದ್ದರೂ ಇಷ್ಟೊಂದು ಒತ್ತಡ ಹಾಕಿ ನೌಕರರ ಜೀವವನ್ನೇಕೆ ಬಲಿ ಪಡೆಯುತ್ತೀರಿ? ಕಂದಾಯ ಸಚಿವರಾದ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರೇ ಸ್ಥಳಕ್ಕೆ ಬಂದು ನಮ್ಮ ಅಹವಾಲು ಆಲಿಸಬೇಕು” ಎಂದು ಪಟ್ಟು ಹಿಡಿದು ರಾತ್ರಿ 10 ಗಂಟೆಯಾದರೂ ಧರಣಿ ಮುಂದುವರಿಸಿದ್ದರು.
ಯಾರನ್ನು ಹೊಣೆ ಮಾಡಬೇಕು ಗೊತ್ತಿಲ್ಲ: ಡಿಸಿ ಶುಭ ಕಲ್ಯಾಣ್
ಪ್ರತಿಭಟನಾಕಾರರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಪ್ರತಿಕ್ರಿಯಿಸಿ, “ಭುವನಾ ಸಾವು ನನಗೆ ವೈಯಕ್ತಿಕವಾಗಿ ಹಾಗೂ ಇಲಾಖೆಗೆ ತುಂಬಾ ನೋವು ತಂದಿದೆ. ಇದು ಆಕಸ್ಮಿಕವಾಗಿ ನಡೆದ ಅಪಘಾತ. ಅಪಘಾತ ನಡೆದ ಜಾಗ ಬ್ಲಾಕ್ ಸ್ಪಾಟ್ ಎಂದು ಪೊಲೀಸರು ಹೇಳುತ್ತಿದ್ದಾರೆ. ರಾತ್ರಿ 7.30ರವರೆಗೆ ಮೀಟಿಂಗ್ ಮಾಡಿದ್ದು ನಿಜ. ನಮ್ಮ ಉದ್ದೇಶ ಎಲ್ಲಾ ಮತದಾರರಿಗೆ ಒಳ್ಳೆಯದಾಗಲಿ ಅನ್ನೋದು. ಸಾವು–ಹುಟ್ಟು ನಮ್ಮ ಕೈಯಲ್ಲಿಲ್ಲ, ನಮಗೂ ಕುಟುಂಬ ಇದೆ, ಅವರ ನೋವು ನಮಗೂ ಅರ್ಥವಾಗುತ್ತದೆ” ಎಂದಿದ್ದಾರೆ.
ಖಾಲಿ ಹುದ್ದೆ ಭರ್ತಿ ಮಾಡಿ:
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಹಾಗೂ ಪದಾಧಿಕಾರಿಗಳು ಮಾತನಾಡಿ, ನಿತ್ಯದ ಕಚೇರಿ ಕೆಲಸಗಳ ಜೊತೆಗೆ ಚುನಾವಣೆ, ಗಣತಿ, ಎಸ್ ಐಆರ್, ಸಾಧನಾ ಸಮಾವೇಶಗಳು, ಖಾತೆ ಆಂದೋಲನ ಹೀಗೆ ಹತ್ತಾರು ಕೆಲಸಗಳನ್ನು ನೌಕರರ ಮೇಲೆ ಹೇರಲಾಗುತ್ತಿದೆ. ಸರ್ಕಾರ ಮೊದಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, “ಯಾರದ್ದೋ ಒತ್ತಡಕ್ಕೆ ಸಿಲುಕಿ ಕೆಲಸ ಮಾಡಬೇಡಿ, ನಿಮ್ಮ ಆರೋಗ್ಯ ಮತ್ತು ಕುಟುಂಬ ಮುಖ್ಯ” ಎಂದು ಸಹೋದ್ಯೋಗಿಗಳಿಗೆ ಸಲಹೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



