ತುಮಕೂರು: ನಗರದ ನ್ಯಾಯಾಲಯ ಆವರಣದಲ್ಲಿ ಸೋಮವಾರ ಹಿರಿಯ ವಕೀಲರಾದ ಎಂ.ಸಿ.ರವೀಶ್ ಅವರ ಮೇಲೆ ಬಿ.ಎ.ನಿರಂಜನ್ ಎಂಬುವವರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸದೆ ಕಲಾಪಗಳಿಂದ ದೂರ ಉಳಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್, ಕರ್ತವ್ಯದ ಮೇಲಿದ್ದ ವಕೀಲರ ಮೇಲೆ ನ್ಯಾಯಾಲಯ ಆವರಣದಲ್ಲಿ ಹಲ್ಲೆ ನಡೆಸಿರುವುದು ಖಂಡನೀಯ. ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ 6 ರಂದು ಸೋಮವಾರ ಮಧ್ಯಾಹ್ನ 2.02ರ ಸಮಯದಲ್ಲಿ ನಗರದ 2ನೇ ಅಧಿಕ ಸಿವಿಲ್ ನ್ಯಾಯಾಲಯ ಹಿರಿಯ ಶ್ರೇಣಿ ನ್ಯಾಯಾಲಯ ಒಳಗಿನಿಂದ ಕಲಾಪಗಳನ್ನು ಮುಗಿಸಿಕೊಂಡು ಹೊರ ಬಂದಂತಹ ಸಂದರ್ಭದಲ್ಲಿ ವಕೀಲ ಎಂ.ಸಿ.ರವೀಶ್ ಅವರ ಮೇಲೆ ಒ.ಎಸ್.359/2015ರ ಪ್ರಕರಣದ 2ನೇ ಪ್ರತಿವಾದಿ ತುಮಕೂರು ತಾಲ್ಲೂಕು ಕೋರಾ ಹೋಬಳಿ ಬ್ರಹ್ಮಸಂದ್ರದ ಬಿ.ಎ. ನಿರಂಜನ್ ಎಂಬಾತ ತನ್ನ ಎದುರಿಗೆ ಏಕೆ ಕೇಸನ್ನು ತೆಗೆದುಕೊಂಡಿದ್ದೀಯಾ? ಎಂದು ವಕೀಲರಾದ ಎಂ.ಸಿ. ರವೀಶ್ ಅವರನ್ನು ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ಬೈದು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮುಖ ತುಟಿ, ಕೆನ್ನೆಮೇಲೆ ರಕ್ತಗಾಯಗಳಾಗುವಂತೆ ಕೈಯಲ್ಲಿ ಹಿಡಿದುಕೊಂಡಿದ್ದ ಕಲ್ಲಿನಿಂದ ಜಜ್ಜಿರುತ್ತಾನೆ.
ಕಾಲಿನಿಂದ ಒದ್ದು ಕುತ್ತಿಗೆ ಮೇಲೆ ಕಾಲಿಟ್ಟು ಸಾಯಿಸಲು ಪ್ರಯತ್ನಿಸಿರುತ್ತಾನೆ. ಈ ಸಮಯದಲ್ಲಿ ಇತರೆ ವಕೀಲರು ಬಿಡಿಸಿರುತ್ತಾರೆ. ತಕ್ಷಣ ಆತನು ಸ್ಥಳದಿಂದ ಪರಾರಿಯಾಗಿರುತ್ತಾನೆ. ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಹಿರೇಹಳ್ಳಿ ಮಹೇಶ್ ಒತ್ತಾಯಿಸಿದರು.
ಹಲ್ಲೆ ಸಂಬಂಧ ವಕೀಲ ಎಂ.ಸಿ. ರವೀಶ್ಅವರು ನಗರಠಾಣೆಗೆ ದೂರು ನೀಡಿ, ಹಲ್ಲೆ ಮಾಡಿದ ನಿರಂಜನ್ನಿಂದ ನನಗೆ ಪ್ರಾಣ ಭೀತಿಯಿರುತ್ತದೆ. ನನಗೆ ಜೀವ ಬೆದರಿಕೆ ಹಾಕಿ, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆತನ ಮೇಲೆ ಕಾನೂನು ಕ್ರಮ ಜರುಗಿ ನನಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ, ಖಜಾಂಚಿ ಸಿಂಧೂ, ಡಿ.ಎನ್.ಜಗದೀಶ್, ಸುರೇಶ್, ಕೆ.ವಿ. ಶ್ರೀನಿವಾಸ ಮೂರ್ತಿ, ವಿ.ಕೆ. ಶ್ರೀನಿವಾಸಮೂರ್ತಿ, ಪದ್ಮಶ್ರೀ, ಸೇವಾ ಪ್ರಿಯ ಹಾಗೂ ನೂರಾರು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಕೀಲರ ಮೇಲೆ ಹಲ್ಲೆ ನಡೆಸಿದ ನಿರಂಜನ್ ಪರವಾಗಿ ಯಾವ ವಕೀಲರೂ ವಕಾಲತ್ತು ವಹಿಸಬಾರದು ಎಂದು ಸಂಘದಲ್ಲಿ ನಿರ್ಣಯ ಮಾಡಲಾಗಿದೆ ಎಂದು ಹೇಳಿದ ಹಿರೇಹಳ್ಳಿ ಮಹೇಶ್, ವಕೀಲರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಿ ವಕೀಲರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
— ಹಿರೇಹಳ್ಳಿ ಮಹೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


