ಕೆಲವೊಮ್ಮೆ ತೀವ್ರವಾದ ಮಸಾಜ್ ಮಾಡಿಸಿಕೊಳ್ಳುವಾಗ, ಮೈತುಂಬಾ ಹಚ್ಚೆ (Tattoos) ಹಾಕಿಸಿಕೊಳ್ಳುವಾಗ ಅಥವಾ ಕಠಿಣವಾದ ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಉಂಟಾಗುವ ನೋವಿನಲ್ಲಿ ಕೆಲವರು ಒಂದು ರೀತಿಯ ನಿರಾಳತೆ ಅಥವಾ ಆನಂದವನ್ನು ಅನುಭವಿಸುತ್ತಾರಂತೆ, ನೋವಿನಲ್ಲಿ ಆನಂದ ಅನುಭವಿಸುವುದು ಹೇಗೆ? ಎನ್ನುವ ಜೈವಿಕ ಮತ್ತು ಮಾನಸಿಕ, ಲೈಂಗಿಕ ಕಾರಣಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎನ್ನುವುದನ್ನು ನೋಡೋಣ…
ನೋವು ಮತ್ತು ‘ಹ್ಯಾಪಿ ಹಾರ್ಮೋನ್ಗಳ’ ಆಟ
ಸಾಮಾನ್ಯವಾಗಿ ನೋವು ಎನ್ನುವುದು ನಮ್ಮ ದೇಹವನ್ನು ಅಪಾಯದಿಂದ ರಕ್ಷಿಸುವ ಒಂದು ರಕ್ಷಣಾತ್ಮಕ ವ್ಯವಸ್ಥೆಯಾಗಿದೆ (Defense Mechanism). ಆದರೆ ಕೆಲವರಲ್ಲಿ ನೋವು ಅನುಭವಿಸಿದಾಗ ಮೆದುಳಿನಲ್ಲಿ ಓಪಿಯಾಡ್ಸ್ (Opioids), ಡೋಪಮೈನ್ (Dopamine) ಮತ್ತು ಸಿರೊಟೋನಿನ್ (Serotonin) ನಂತಹ ನ್ಯೂರೋಕೆಮಿಕಲ್ ಗಳು ಬಿಡುಗಡೆಯಾಗುತ್ತವೆ. ಡೋಪಮೈನ್ ನಮ್ಮನ್ನು ಸದಾ ಸಂತೋಷ ಹಾಗೂ ಪ್ರೇರಣೆಯಿಂದ ಇರಿಸುವ ಹಾರ್ಮೋನ್ ಆಗಿದೆ. ತೀವ್ರವಾದ ವ್ಯಾಯಾಮದ ನಂತರ ಸ್ನಾಯುಗಳು ನೋಯುತ್ತಿದ್ದರೂ, ಈ ಹಾರ್ಮೋನ್ ಗಳ ಬಿಡುಗಡೆಯಿಂದಾಗಿ ಮನಸ್ಸಿಗೆ ಒಂದು ರೀತಿಯ ವಿಚಿತ್ರ ಆನಂದ ಮತ್ತು ನಿರಾಳತೆ (Euphoric Experience) ಸಿಗುತ್ತದೆ.
‘ನೋ ಪೇನ್, ನೋ ಗೇನ್’ :
ನಮ್ಮ ಸಮಾಜದಲ್ಲಿ “ನೋವಿಲ್ಲದೆ ಯಶಸ್ಸಿಲ್ಲ” (No pain, no gain) ಎಂಬ ನಂಬಿಕೆ ಆಳವಾಗಿ ಬೇರೂರಿದೆ. ಉದಾಹರಣೆಗೆ, ಮಸಾಜ್ ಮಾಡುವಾಗ ದೇಹಕ್ಕೆ ಎಷ್ಟು ನೋವಾಗುತ್ತದೆಯೋ, ಅಷ್ಟು ಹೆಚ್ಚು ಗುಣವಾಗುತ್ತದೆ ಎಂದು ಅನೇಕರು ನಂಬುತ್ತಾರೆ. ಇನ್ನು ಕೆಲವರು ಮಾನಸಿಕ ಒತ್ತಡ ಅಥವಾ ಹಳೆಯ ನೋವುಗಳಿಂದ ಹೊರಬರಲು, ತಮ್ಮ ಗಮನವನ್ನು ಬದಲಾಯಿಸಲು ಇಂತಹ ದೈಹಿಕ ನೋವನ್ನು ಬಯಸುತ್ತಾರೆ.
ಜೀನ್ಸ್ ಮತ್ತು ಸೆಕ್ಸ್ ಹಾರ್ಮೋನ್ಗಳ ಪ್ರಭಾವ
ಪ್ರತಿಯೊಬ್ಬ ವ್ಯಕ್ತಿಯ ದೇಹದ ರಚನೆ, ಜೀನ್ ಗಳು (Genetics) ಮತ್ತು ಸೆಕ್ಸ್ ಹಾರ್ಮೋನ್ ಗಳ ಮಟ್ಟ ಬೇರೆ ಬೇರೆಯಾಗಿರುತ್ತದೆ. ಕಠಿಣ ದೈಹಿಕ ಶ್ರಮ ಪಡುವವರಲ್ಲಿ ನೋವನ್ನು ತಡೆದುಕೊಳ್ಳುವ ಸಾಮರ್ಥ್ಯ (Pain Tolerance) ಹೆಚ್ಚಿರುತ್ತದೆ. ಆದರೆ, ನಿಯಂತ್ರಿತ ನೋವನ್ನು ಪದೇ ಪದೇ ಅನುಭವಿಸುವವರ ದೇಹವು ಕಾಲಕ್ರಮೇಣ ಅದಕ್ಕೆ ಹೊಂದಿಕೊಂಡುಬಿಡುತ್ತದೆ. ನಂತರ ಅವರಿಗೆ ಅದಕ್ಕಿಂತ ಹೆಚ್ಚಿನ ನೋವು ಸಿಕ್ಕಾಗ ಮಾತ್ರ ತೃಪ್ತಿ ಸಿಗುವಂತಾಗುತ್ತದೆ.
ಬಿಡಿಎಸ್ ಎಂ (BDSM) ಮತ್ತು ಪರಸ್ಪರ ಒಪ್ಪಿಗೆ
ನೋವನ್ನು ನೀಡುವುದು ಅಥವಾ ಪಡೆಯುವುದರ ಮೂಲಕ ಮಾನಸಿಕ ತೃಪ್ತಿ ಹೊಂದುವ ವಿಷಯ ಬಂದಾಗ ‘ಬಿಡಿಎಸ್ ಎಂ’ (BDSM) ಪ್ರಸ್ತಾಪವಾಗುತ್ತದೆ. ಇದು ವಯಸ್ಕರ ನಡುವೆ ಪರಸ್ಪರ ಒಪ್ಪಿಗೆ, ಸುರಕ್ಷತೆ ಮತ್ತು ಗಡಿಗಳನ್ನು (Boundaries) ಮೊದಲೇ ನಿಗದಿಪಡಿಸಿಕೊಂಡು ನಡೆಸುವ ಒಂದು ನಡವಳಿಕೆಯಾಗಿದೆ. ಇದು ಯಾವುದೇ ರೀತಿಯ ದೌರ್ಜನ್ಯ ಅಥವಾ ಬಲವಂತದ ಆಕ್ರಮಣವಾಗಿರುವುದಿಲ್ಲ.
ಎಚ್ಚರಿಕೆ: ಸೂಕ್ತ ತಿಳುವಳಿಕೆ ಇಲ್ಲದೆ ಇಂತಹ ನೋವು ನೀಡುವ ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳುವುದು ದೈಹಿಕವಾಗಿ ಅಪಾಯ ತಂದೊಡ್ಡಬಹುದು ಮತ್ತು ಹಳೆಯ ಮಾನಸಿಕ ಆಘಾತಗಳನ್ನು (Trauma) ಮತ್ತಷ್ಟು ಉಲ್ಬಣಗೊಳಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಈ ಮಾಹಿತಿಯನ್ನು ಅಂತರ್ಜಾಲ ಮಾಹಿತಿಗಳ ಆಧಾರದಲ್ಲಿ ಬರೆಯಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


