ಸರಗೂರು: ಮಕ್ಕಳಲ್ಲಿ ಶಿಕ್ಷಣದ ಬಗೆಗೆ ಪ್ರೀತಿ ಹುಟ್ಟಿಸುವ ಕಲಿಕೆಯು ಬದುಕಿನ ಮೊದಲ ಆದ್ಯತೆಯಾಗಬೇಕಾಗಿದೆ ಎಂದು ಎಚ್.ಡಿ.ಕೋಟೆ ಕ್ಷೇತ್ರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೇಣುಗೋಪಾಲ್ ತಿಳಿಸಿದರು.
ಪಟ್ಟಣದ ಶ್ರೀ ಷಡಕ್ಷರಿ ದೇವರಾಜ ಸ್ವಾಮಿ ನಿರಂತರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ವರ್ಷದ ಪ್ರಥಮ ದಿನದ ಮಕ್ಕಳಿಗೆ ‘ಅಕ್ಷರ ಅಭ್ಯಾಸ’ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಮಗುವಿಗೆ ಶಿಕ್ಷಕರು ಅಕ್ಷರಾಭ್ಯಾಸ ಮಾಡಿಸುವುದು ರೂಢಿ. ಆದರೆ ಅಂದು ಮಕ್ಕಳಿಗೆ ಶಿಕ್ಷಕರು ಪಾಠ ಹೇಳಿಕೊಡಲಿಲ್ಲ. ಬದಲಿಗೆ ಪಾಲಕರೇ ತಮ್ಮ ಮಕ್ಕಳನ್ನು ಮುದ್ದಿನಿಂದ ಮಡಿಲಲ್ಲಿ ಕೂಡಿಸಿಕೊಂಡು ಅಕ್ಷರಭ್ಯಾಸ ಮಾಡಿಸಿದರು. ಇದರಿಂದಾಗಿ ಮಕ್ಕಳ ಮುಖದಲ್ಲಿ ಶಿಕ್ಷಕರ ಬೆತ್ತದ ಭಯವಿರಲಿಲ್ಲ. ಅಪ್ಪ–ಅಮ್ಮನ ಜೊತೆಯಲ್ಲಿ ಕುಳಿತು ನಗುನಗುತ್ತಲೇ ಶಿಕ್ಷಣಾಭ್ಯಾಸಕ್ಕೆ ತಮ್ಮ ಪುಟ್ಟ ಕೈಗಳಲ್ಲಿ ಮುನ್ನುಡಿ ಬರೆದರು.
ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ನಾಮಕರಣ, ಅನ್ನಪ್ರಾಶನದಂತೆ ಅಕ್ಷರಾಭ್ಯಾಸಕ್ಕೂ ವಿಶೇಷ ಪದ್ಧತಿಯಿದೆ. ‘ನಕ್ಷರತಿ ಇತಿ ಅಕ್ಷರಂ’ ಎಂದರೆ ಯಾವುದಕ್ಕೆ ಅಳಿವಿಲ್ಲವೋ ಅದೇ ಅಕ್ಷರ. ಆದರೆ ಈಗಿನ ಸಮಾಜದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಮೊದಲೇ ಟಿವಿ, ಡಿವಿಡಿಗಳ ಮೂಲಕ ಬಾಯಿಪಾಠ ಮಾಡಿಸುವುದು ಅಭ್ಯಾಸವಾಗಿಬಿಟ್ಟಿದೆ. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಶಾಲೆ ಎಂಬುದನ್ನು ಪಾಲಕರು ಮರೆಯಬಾರದು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ದಡದಹಳ್ಳಿ ಪಟ್ಟದ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿ, “ಈಗಿನ ಸಮಾಜದಲ್ಲಿ ಮಕ್ಕಳ ಗ್ರಹಿಕಾ ಸಾಮರ್ಥ್ಯ ಹೆಚ್ಚಾಗಿದೆ. ಎರಡು-ಎರಡೂವರೆ ವರ್ಷದ ಮಕ್ಕಳಿಗೆ ವಸ್ತುಗಳನ್ನು ತಿಳಿಯುವ ಕುತೂಹಲವಿರುತ್ತದೆ. ಮಕ್ಕಳು ತೊದಲು ನುಡಿಗಳಿಂದ ತಪ್ಪು ಉಚ್ಚರಿಸಿದಾಗ ಪಾಲಕರು ನಗುನಗುತ್ತಾ ತಿದ್ದಿ ಹೇಳಬೇಕು,” ಎಂದರು.
ಮುಂದುವರಿದು, “ಅಕ್ಷರಾಭ್ಯಾಸಕ್ಕೆ ಮುಂಚೆ ಮಕ್ಕಳಿಗೆ ಆನೆ, ಹಸು, ಹುಲಿ, ಜಿಂಕೆಯಂತಹ ಚಿತ್ರಗಳನ್ನು ಪರಿಚಯಿಸಬೇಕು. ಅವುಗಳ ಶಬ್ದ ಹಾಗೂ ವರ್ತನೆಗಳನ್ನು ತೋರಿಸಿ ಹೇಳಿಕೊಟ್ಟಾಗ ಮಕ್ಕಳಿಗೆ ಶಿಕ್ಷಣವು ಚೆನ್ನಾಗಿ ಅರ್ಥವಾಗುತ್ತದೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಠದ ಕಿರಿಯ ಗುರುಸ್ವಾಮಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಂಚಿಪುರ ವಲಯ ಮೇಲ್ವಿಚಾರಕರಾದ ಸಲೀಂ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


