ತುಮಕೂರು: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಎಲ್ಲೆಯೂ ಮತದಾರರ ಪಟ್ಟಿಗೆ ಅಕ್ರಮವಾಗಿ ಮತದಾರರನ್ನು ಸೇರಿಸುವ ಕೆಲಸ ಮಾಡಿಲ್ಲ, ಇದು ಬಿಜೆಪಿಯ ಊಹಾಪೋಹ ಅಷ್ಟೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ ತಿಳಿಸಿದ್ದಾರೆ.
ನಗರದ ಜಯನಗರ ಪೂರ್ವದಲ್ಲಿರುವ ತಮ್ಮ ಗೃಹ ಕಚೇರಿ ಬಳಿ ಎಸ್.ಐ.ಆರ್.ಗೆ ಪೂರಕವಾಗಿ ಹೆಲ್ಪ್ ಲೈನ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಮತಪಟ್ಟಿಗೆ ಅಕ್ರಮವಾಗಿ ಮತದಾರರನ್ನು ಸೇರಿಸ ಬೇಕೆಂದರೆ, ರೇಷನ್ ಕಾರ್ಡು, ಪಾಸ್ಪೋರ್ಟ್, ಬ್ಯಾಂಕ್ ಪಾಸ್ ಪುಸ್ತಕ ಸೇರಿದಂತೆ ಕನಿಷ್ಠ ದಾಖಲಾತಿಗಳಾದರೂ ಬೇಕು. ಅಂತಹ ಯಾವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಎಸ್.ಐ.ಆರ್. ಮೂಲಕ ಕಾಂಗ್ರೆಸ್ ಮತದಾರರನ್ನು ಕಿತ್ತು ಹಾಕಬಹುದು ಎಂಬ ಭ್ರಮೆಯಲ್ಲಿದ್ದ ಬಿಜೆಪಿಗೆ, ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಎಸ್.ಐ.ಆರ್. ನಿರಾಸೆ ತಂದಿದೆ. ಹಾಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳು ಇಲ್ಲ ಎಂದರು.
ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಎಸ್.ಷಫಿ ಅಹಮದ್ ಮಾತನಾಡಿ, ಜೂನ್ 30 ರಿಂದ ಜುಲೈ 29 ರವರಗೆ ಒಂದು ತಿಂಗಳ ಕಾಲ ರಾಜ್ಯದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಚಾಲ್ತಿಯಲ್ಲಿದೆ. ದೇಶದ ಕೆಲ ರಾಜ್ಯಗಳಲ್ಲಿ ಆಗಿರುವ ತೊಂದರೆಯನ್ನು ಮನಗಂಡು, ಕಳೆದ ಒಂದು ವರ್ಷದಿಂದಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಎಸ್.ಐ.ಆರ್. ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು. ಅದರ ಭಾಗವಾಗಿ ಜನರು ಎಚ್ಚೆತ್ತು ತಮ್ಮ ಹಕ್ಕಿನ ರಕ್ಷಣೆಗ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತದಾರರನ್ನು ಪಟ್ಟಿಯಿಂದ ಹೊರಗಿಡಬಹುದು ಎಂದು ಕೊಂಡಿದ್ದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಇದರಿಂದ ನಿರಾಸೆಯಾಗಿದೆ.
ಎಸ್.ಐ.ಆರ್. ಪ್ರಕ್ರಿಯೆ ಸರಿಯಾಗಿದೆಯೇ ಚುನಾವಣಾ ಆಯೋಗ, ಎಸ್.ಐ.ಆರ್. ಪ್ರಕ್ರಿಯೆ ಸರಿಯಾಗಿದೆಯೇ, ಇಲ್ಲವೇ ಎಂಬುದನ್ನು ತಿಳಿಯಲು ಎಲ್ಲಾ ಪಕ್ಷಗಳಿಗೂ ಬೂತ್ ಮಟ್ಟದ ಏಜೆಂಟರಿಗೆ (ಬಿಎಲ್ ಒ-02) ಅಧಿಕೃತವಾಗಿ ಅವಕಾಶ ನೀಡಿದೆ. ಅವರಿಂದ ಮಾಹಿತಿ ಪಡೆಯಲಿ, ಅದನ್ನು ಬಿಟ್ಟು ನಾವು ಅಂದುಕೊಂಡಿದ್ದು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಎಸ್.ಐ.ಆರ್. ಪ್ರಕ್ರಿಯೆಯನ್ನೇ ವಿರೋಧಿಸುವುದು ಸರಿಯಲ್ಲ. ಒಂದು ವೇಳೆ ಅಕ್ರಮ ಮತದಾರರು ಸೇರ್ಪಡೆಗೊಂಡಿದ್ದರೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವಿದೆ. ಆ ಸಂದರ್ಭದಲ್ಲಿ ತಮ್ಮ ಬಳಿ ದಾಖಲೆಗಳಿದ್ದರೆ, ಅವುಗಳೊಂದಿಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಮುಕ್ತ ಅವಕಾಶವಿದೆ. ಅದನ್ನು ಬಿಟ್ಟು ಗೊಂದಲ ಸೃಷ್ಟಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತಿತರರು ಪಾಲ್ಗೊಂಡಿದ್ದರು.
ಕರ್ನಾಟಕದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಪ್ರಾರಂಭವಾಗಿ 12 ದಿನ ಕಳೆದಿದೆ. ಸರ್ಕಾರ ಈಗಾಗಲೇ ವ್ಯಾಪಕ ಪ್ರಚಾರ ಕೈಗೊಂಡು ಎಸ್.ಐ.ಆರ್. ಪ್ರಕ್ರಿಯೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿದೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೆಂದರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಪ್ರತಿಯೊಬ್ಬರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು, ಕಾಂಗ್ರೆಸ್ ಪಕ್ಷ ಹೆಲ್ಪ್ ಡೆಸ್ಕ್ ನಡೆಸುತ್ತಿದೆ. ಇದರ ಪ್ರಯೋಜನವನ್ನು ಮತದಾರರು ಪಡೆದುಕೊಂಡು ತಮ್ಮ ಸಂವಿಧಾನಬದ್ಧ ಹಕ್ಕನ್ನು ಉಳಿಸಿಕೊಳ್ಳಬೇಕು.
ಮುರಳೀಧರ್ ಹಾಲಪ್ಪ, ಕೆಪಿಸಿಸಿ ಉಪಾಧ್ಯಕ್ಷ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


