ಮಧುಗಿರಿ: 40 ವರ್ಷದಿಂದ ಬೇಸಾಯ ಮಾಡಿಕೊಂಡಿದ್ದ ರೈತರನ್ನು ಒಕ್ಕಲೆಬ್ಬಿಸಿ ಅಲ್ಲಿದ್ದ ಸಾವಿರಾರು ಮರಗಳ ಮಾರಣ ಹೋಮ ನಡೆಸಿದ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಕ್ರಮ ಪ್ರಕೃತಿ ವಿರೋಧಿಯಾಗಿದೆ. ತಕ್ಷಣ ಇದಕ್ಕೆ ಪರಿಹಾರ ಕೊಟ್ಟು, ರೈತರಿಗೆ ಪರ್ಯಾಯ ಭೂಮಿ ನೀಡುವಂತೆ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ.ಶಂಕರಪ್ಪ ಆಗ್ರಹಿಸಿದ್ದಾರೆ.
ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿಯ ಬುಕ್ಕಾಪಟ್ಟಣದ ಮುತ್ತುಗಾನಹಳ್ಳಿ ಸ.ನಂ.31 ರಲ್ಲಿ ಕಳೆದ 40 ವರ್ಷದಿಂದ 59 ರೈತರಿಗೆ ಸಾಗುವಳಿ ನೀಡಿದ್ದರು. ಇಲ್ಲಿ ರೈತರು ಬೇಸಾಯ ಮಾಡುತ್ತಿದ್ದು, ಹಲವರು ಮರವಳಿ ಬೆಳೆಸಿದ್ದರು. ಜಿಲ್ಲಾಡಳಿತ, ಅರಣ್ಯ ಇಲಾಖೆಯವರು ಪೊಲೀಸ್ ಬಲಪ್ರಯೋಗ ಮಾಡಿ ಯಂತ್ರಗಳಿಂದ ಸಾವಿರಾರು ಮರಗಳನ್ನು ಕತ್ತರಿಸಿದ್ದಾರೆ. ಇದು ಮಾನವೀಯ ಗುಣವುಳ್ಳ ಅಧಿಕಾರಿಗಳ ವರ್ತನೆ ಎನ್ನಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರೇ ನೀಡಿದ್ದ ಸಾಗುವಳಿಯನ್ನು ನಂಬಿ ರೈತರು ಬಂಡವಾಳ ಹಾಕಿ ಅರಣ್ಯಕರಣ, ತೋಟಗಾರಿಕೆ ಬೆಳೆ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಈಗ ಏಕಾಏಕಿ ಜಿಲ್ಲಾಡಳಿತ ಈ ಪ್ರದೇಶವನ್ನು ಕಬ್ಜಾ ಮಾಡಿಕೊಂಡು ಸಾವಿರಾರು ಮರಗಳಿಗೆ ಕೊಡಲಿ ಹಾಕಿದ್ದು ಅಕ್ಷಮ್ಯ ಅಪರಾಧವಾಗಿದೆ. ಪರಿಸರ ಸಂರಕ್ಷಣೆ ಅರಣ್ಯ ಇಲಾಖೆ ಕೆಲಸ. ಆದರೆ ರೈತರು ಬೆಳೆಸಿದ ಮರಗಳನ್ನು ಅರಣ್ಯ ಇಲಾಖೆಯೇ ಕಡಿದು ಹಾಕಿರುವುದು ಖಂಡನೀಯ.
ಇತ್ತ ಮರಗಳನ್ನು ಕಡಿದ ಅರಣ್ಯ ಇಲಾಖೆ ರೈತರನ್ನು ಹೊರದಬ್ಬಿದೆ. ದೇಶದ ಆಹಾರ ಭದ್ರತೆಗೆ ಕನ್ನ ಹಾಕುವುದು ಖಂಡನೀಯ, ದೇಶದ ಆಹಾರ ಭದ್ರತೆ ನಿಂತಿರುವುದು ಈಗ ರೈತರಿಂದ. ರಾಜ್ಯದಲ್ಲಿ ಇಂತಹ ಲಕ್ಷಾಂತರ ರೈತರು ಕಳೆದ 50 ವರ್ಷದಿಂದ ಸಾಗುವಳಿ ಮಾಡಿಕೊಂಡು ಕೃಷಿಯಿಂದ ವಿಮುಖರಾದರೆ ಜನರು ಮಣ್ಣು ತಿನ್ನಬೇಕಾಗುತ್ತದೆ. ಹಾಗಾಗಿ ಕೃಷಿ ಸ್ಥಾಪನೆಗೆ ಮುಂದಾಗಬೇಕು. ತಕ್ಷಣ ಅವರಿಗೆ ನಷ್ಟ ಪರಿಹಾರ ನೀಡಿ ಸರ್ಕಾರ ಬೇರೆ ಭೂಮಿಯನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯ ಬುಕ್ಕಾಪಟ್ಟಣದ ಮುತ್ತುಗಾನಹಳ್ಳಿ ಸ.ನಂ.31 ರಲ್ಲಿ ಸರ್ಕಾರವೇ ನೀಡಿರುವ ಸಾಗುವಳಿಯಲ್ಲಿ ಭೂಮಿ ಹಸನು ಮಾಡಿಕೊಂಡು ಕಳೆದ 50 ವರ್ಷದಿಂದ ಬೇಸಾಯ ಮಾಡುತ್ತಾ ದೇಶಕ್ಕೆ ಅನ್ನ ನೀಡುವ ರೈತರ ಕತ್ತು ಸೀಳುವ ಕೆಲಸವನ್ನು ಜಿಲ್ಲಾಡಳಿತ ಮಾಡಿದ್ದು ರೈತರು ಬೀದಿಗೆ ಬಿದ್ದಿದ್ದು ಹತ್ತಾರು ಕೋಟಿ ರೂ. ನಷ್ಟವಾಗಿದೆ. ಇವರಿಗೆ ನ್ಯಾಯ ಕೊಡುವವರು ಯಾರು? ರೈತರು ಕೃಷಿಯಿಂದ ವಿಮುಖರಾದರೆ ಜನರು ಮಣ್ಣು ತಿನ್ನಬೇಕಾಗುತ್ತದೆ.
— ಜೆ.ಸಿ.ಶಂಕರಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


