ತುಮಕೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಯುವತಿ ಲಾವಣ್ಯಳನ್ನು ಸಾರ್ವಜನಿಕರ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಲಾವಣ್ಯ ಆತನ ಪ್ರೀತಿಯನ್ನು ನಿರಾಕರಿಸಿದ್ದರೂ ಆತ ಅವಳನ್ನು ಒತ್ತಾಯಿಸುತ್ತಿದ್ದ, ಪೀಡಿಸುತ್ತಿದ್ದ. ಅವಳು ಸಿಗದಿರುವುದನ್ನು ತಡೆಯಲಾಗದೆ ಆಕೆಯನ್ನು ಕೊಂದುಹಾಕಿದ. ಮಹಿಳೆಯರ ಮೇಲಿನ ಇಂತಹ ಕ್ರೂರ ಹಿಂಸಾಚಾರಗಳು ಸಮಾಜದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ, ಪುರುಷಪ್ರಧಾನ ಮನೋಭಾವ ಮತ್ತು ಮಾನವೀಯ ಮೌಲ್ಯಗಳ ಕುಸಿತವನ್ನು ಬಿಂಬಿಸುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಹಿಂಸೆ, ದ್ವೇಷ, ಕ್ರೌರ್ಯ, ಅನೈತಿಕ ಸಂಬಂಧಗಳನ್ನು ವೈಭವೀಕರಿಸುವುದು ನೋಡುತ್ತೇವೆ. ಇಂತಹ ದೃಶ್ಯಾವಳಿಗಳು ಯುವಕರ ಮನಸ್ಸನ್ನು ವಿಷಮಗೊಳಿಸುತ್ತಿವೆ. ಅಲ್ಲದೆ ಎಷ್ಟೋ ಸಿನಿಮಾಗಳಲ್ಲಿ ಪ್ರೀತಿಯ ನಿರಾಕರಣೆಯಾದಾಗ ಅದು ಹಿಂಸೆ, ಕೊಲೆಯಲ್ಲಿ ಕೊನೆಗೊಳ್ಳುವ ಉದಾಹರಣೆಗಳು ಸಾಕಷ್ಟಿವೆ.
ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸಮಾಜದಲ್ಲಿ ಮಹಿಳೆಯರ ವ್ಯಕ್ತಿತ್ವವನ್ನು ಗೌರವಿಸುವ, ಅವರನ್ನು ಸಮಾನವಾಗಿ ನೋಡುವ ಮನೋಭಾವ ಬೆಳೆಸಬೇಕು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಇಂತಹ ಕ್ರೌರ್ಯ, ಅಶ್ಲೀಲತೆ, ಮಹಿಳೆಯರ ಅಗೌರವವನ್ನು ಚಿತ್ರಿಸುವ ಸಿನಿಮಾಗಳನ್ನು ಸೆನ್ಸಾರ್ ಮಾಡಬೇಕು, ಸೋಶಿಯಲ್ ಮೀಡಿಯಾಗಳಲ್ಲಿ ಎಗ್ಗಿಲ್ಲದೆ ಸಿಗುವ ಅಶ್ಲೀಲತೆಗೆ ಸರ್ಕಾರವು ಕಡಿವಾಣ ಹಾಕಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


