ಸರಗೂರು: ಸರ್ಕಾರದಿಂದ ದ್ವಿಚಕ್ರ ವಾಹನ ಸೌಲಭ್ಯ ಪಡೆಯುವ ಪ್ರತಿಯೊಬ್ಬ ವಿಕಲಚೇತನರೂ ಕಡ್ಡಾಯವಾಗಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹೊಂದಿರಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ತಾಲೂಕು ಪಂಚಾಯಿತಿ ವತಿಯಿಂದ ಶೇ.5ರಷ್ಟು ಅನುದಾನದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಆರ್.ಡಬ್ಲ್ಯೂ (VRW) ಹಾಗೂ ಎಂ.ಆರ್.ಡಬ್ಲ್ಯೂ (MRW) ಕಾರ್ಯಕರ್ತರಿಗೆ ಬೈಕ್ಗಳು ಹಾಗೂ ಕಾರ್ಯನಿರ್ವಹಣೆಗೆ ಅಗತ್ಯವಾದ ಲ್ಯಾಪ್ಟಾಪ್ಗಳನ್ನು ವಿತರಿಸಿ ಅವರು ಮಾತನಾಡಿದರು.
“ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿ.ಆರ್.ಡಬ್ಲ್ಯೂ ಹಾಗೂ ಎಂ.ಆರ್.ಡಬ್ಲ್ಯೂ ಕಾರ್ಯಕರ್ತರ ಶ್ರಮ ಪ್ರಶಂಸನೀಯ. ಪ್ರಸ್ತುತ ವಿತರಿಸಲಾಗಿರುವ ಬೈಕ್ ಹಾಗೂ ಲ್ಯಾಪ್ಟಾಪ್ಗಳಿಂದಾಗಿ ಗ್ರಾಮಗಳಿಗೆ ಸರಳವಾಗಿ ಭೇಟಿ ನೀಡಿ, ಮಾಹಿತಿಯನ್ನು ತಕ್ಷಣವೇ ದಾಖಲಿಸಲು ಮತ್ತು ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸಲು ಅನುಕೂಲವಾಗಲಿದೆ,” ಎಂದು ಶಾಸಕರು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಪ್ರೇಮ್ ಕುಮಾರ್ ಮಾತನಾಡಿ, “ತಾಲೂಕಿನಲ್ಲಿ ಒಟ್ಟು ಸುಮಾರು 1,500 ವಿಶೇಷಚೇತನರಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಲ್ಯಾಪ್ಟಾಪ್ ಹಾಗೂ ಅರ್ಹ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ,” ಎಂದರು.
ಇದೇ ವೇಳೆ ಎಂ.ಆರ್.ಡಬ್ಲ್ಯೂ ಕಾರ್ಯಕರ್ತ ದೇವರಾಜು ಮಾತನಾಡಿ, ತಾಲೂಕು ಮಟ್ಟದಲ್ಲಿ ವಿಕಲಚೇತನರ ಕಾರ್ಯಕ್ರಮಗಳು ಹಾಗೂ ಸಭೆಗಳನ್ನು ನಡೆಸಲು ಸಮುದಾಯ ಭವನದ ಕೊರತೆಯಿದ್ದು, ಸೂಕ್ತ ಭವನ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಅಲ್ಲದೆ, ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ವಿ.ಆರ್.ಡಬ್ಲ್ಯೂ ಕಾರ್ಯಕರ್ತರಿಗೆ ಪ್ರತ್ಯೇಕ ಕೊಠಡಿ ಹಾಗೂ ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರಲ್ಲಿ ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಮೋಹನ್ ಕುಮಾರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಚೆಲುವರಾಜು, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ನಿಂಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ನರೇಗಾ ಯೋಜನಾಧಿಕಾರಿ ಮಹದೇವಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ಚೆಲುವಕೃಷ್ಣ ಹಾಗೂ ವಿ.ಆರ್.ಡಬ್ಲ್ಯೂ ಕಾರ್ಯಕರ್ತರಾದ ಸೋಮೇಶ್, ಬಸವರಾಜು, ಸಂತೋಷ, ಮಹದೇವಮೂರ್ತಿ, ನಾಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


