ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಸಮೀಪ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಬೆಂಗಳೂರು ನಿವಾಸಿ ಶ್ರೀಕಾಂತ್ (28ವರ್ಷ) ಎಂದು ಗುರುತಿಸಲಾಗಿದೆ. ಶ್ರೀಕಾಂತ್ ಅವರು ತಮ್ಮ ಸ್ನೇಹಿತರ ತಂಡದೊಂದಿಗೆ ಜುಲೈ 17ರಂದು ಕೊಡಚಾದ್ರಿ ವೀಕ್ಷಣೆಗಾಗಿ ಆಗಮಿಸಿದ್ದರು. ಹೊಸನಗರ ತಾಲೂಕಿನ ಸಂಪೇಕಟ್ಟೆ ಸಮೀಪದ ಕಟ್ಟಿನಹೊಳೆ ಗ್ರಾಮದಲ್ಲಿರುವ ಸ್ನೇಹಿತರೊಬ್ಬರ ಮನೆಯಲ್ಲಿ ಇಡೀ ತಂಡ ತಂಗಿತ್ತು. ಶನಿವಾರ ಮುಂಜಾನೆ ಕೊಡಚಾದ್ರಿ ಶಿಖರವನ್ನು ಏರಲು ಇವರೆಲ್ಲರೂ ಯೋಜಿಸಿದ್ದರು.
ಆದರೆ, ಶುಕ್ರವಾರ ರಾತ್ರಿ ತಂಗಿದ್ದ ಮನೆಯಲ್ಲಿದ್ದಾಗಲೇ ಶ್ರೀಕಾಂತ್ ಅವರಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು, ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಎಚ್ಚೆತ್ತ ಸ್ನೇಹಿತರು ಅವರನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಪರೀಕ್ಷಿಸಿದ ವೈದ್ಯರು ಶ್ರೀಕಾಂತ್ ಅವರು ಈಗಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಸ್ಥರು ಶಿವಮೊಗ್ಗಕ್ಕೆ ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ಸೇರಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೆಲವೇ ದಿನಗಳ ಹಿಂದಷ್ಟೇ ಚಿತ್ರ ನಿರ್ಮಾಪಕ ಭಾ.ಮ. ಹರೀಶ್ ಅವರ ಪುತ್ರ ಕೂಡ ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದಾಗ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


