ಬೆಂಗಳೂರು: ಕರ್ನಾಟಕದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯ ಶಿರಾ ಬಳಿ ನಿರ್ಮಿಸಬೇಕೆಂದು ಕೋರಿ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರವು ಬೆಂಗಳೂರಿನ ಸಮೀಪದಲ್ಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಅದನ್ನು ಸಿರಾ ಬಳಿ ನಿರ್ಮಿಸಬೇಕು ಎಂಬುದು ರಾಜ್ಯದ ಬಹುತೇಕ ಜನಪ್ರತಿನಿಧಿಗಳ ಒತ್ತಾಯವಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ. ಕಳೆದ ವರ್ಷ ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳ ಶಾಸಕರು ತಮಗೆ ಪತ್ರ ಬರೆದು ಈ ಬಗ್ಗೆ ಒತ್ತಾಯಿಸಿದ್ದರು ಎಂದು ಅವರು ನೆನಪಿಸಿದ್ದಾರೆ.
ಈಗಾಗಲೇ ಕರ್ನಾಟಕವು ಬೆಂಗಳೂರು ಕೇಂದ್ರಿತವಾಗಿ ಅಭಿವೃದ್ಧಿ ಹೊಂದಿದ್ದು, ಮತ್ತೊಂದು ನಿಲ್ದಾಣವನ್ನು ಬೆಂಗಳೂರಿನ ಸಮೀಪವೇ ನಿರ್ಮಿಸಿದರೆ ಉತ್ತರ ಮತ್ತು ಮಧ್ಯ ಕರ್ನಾಟಕದ ಭಾಗಗಳಿಗೆ ಅನ್ಯಾಯವಾಗುತ್ತದೆ.
ಶಿರಾದಲ್ಲಿ ನಿರ್ಮಿಸುವುದರಿಂದ ಈ ಭಾಗಗಳ ಪ್ರಗತಿಗೆ ದೊಡ್ಡ ವೇಗ ಸಿಗಲಿದೆ. ಸಿರಾದ ಸುತ್ತಮುತ್ತ ಮುಂಬೈ -– ಬೆಂಗಳೂರು ಕೈಗಾರಿಕಾ ಕಾರಿಡಾರ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (NIMZ), ಚೆನ್ನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್ ಹಾಗೂ KIADB ಕೈಗಾರಿಕಾ ಪ್ರದೇಶಗಳಿವೆ. ಈ ಭಾಗದಲ್ಲಿ NH-48, NH-69, NH-544E ನಂತಹ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಹೊಸ ರೈಲು ಮಾರ್ಗಗಳ ಬಲವಾದ ಸಾರಿಗೆ ಸಂಪರ್ಕವಿದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಹೆಚ್ಚಿನ ಪ್ರಮಾಣದ ಸರ್ಕಾರಿ ಭೂಮಿ ಇಲ್ಲಿ ಲಭ್ಯವಿದೆ. ಭದ್ರಾ ಮೇಲ್ದಂಡೆ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ನೀರಿನ ಸೌಕರ್ಯವೂ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಚಿತ್ರದುರ್ಗದ DRDO, ಐಐಎಸ್ಸಿ (IISc) ಕ್ಯಾಂಪಸ್ ಹಾಗೂ ತುಮಕೂರಿನ ಗುಬ್ಬಿಯಲ್ಲಿರುವ ಹೆಚ್ಎಎಲ್ (HAL) ಹೆಲಿಕಾಪ್ಟರ್ ಘಟಕಗಳು ಇಲ್ಲಿಗೆ ಅತ್ಯಂತ ಸಮೀಪದಲ್ಲಿವೆ.
150 ಕಿ.ಮೀ ನಿಯಮಕ್ಕೆ ಪೂರಕ:
DGCA ನಿಯಮಾವಳಿಗಳ ಪ್ರಕಾರ, ಈ ಸ್ಥಳವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 150 ಕಿ.ಮೀ ದೂರದಲ್ಲಿದೆ. ಇದರಿಂದಾಗಿ ಮಧ್ಯ ಮತ್ತು ಉತ್ತರ ಕರ್ನಾಟಕದ ಜನರಿಗೆ ಅಂತಾರಾಷ್ಟ್ರೀಯ ಪ್ರಯಾಣ ಹಾಗೂ ಸರಕು ಸಾಗಣೆಗೆ (ಕಾರ್ಗೋ) ದೊಡ್ಡ ಅನುಕೂಲವಾಗಲಿದ್ದು, ರಾಜ್ಯದ ಸಮತೋಲಿತ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವಿ.ಸೋಮಣ್ಣ ಪತ್ರದಲ್ಲಿ ವಿವರಿಸಿದ್ದಾರೆ. ರಾಜ್ಯ ಸರ್ಕಾರವು ಸಮಗ್ರ ಅಭಿವೃದ್ಧಿಯನ್ನೇ ಮಾನದಂಡವಾಗಿಟ್ಟುಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


