ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಭೂಯುದ್ಧ ಜೋರಾಗಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೇರಿದ ಜಮೀನಿಗೂ ಸಹ ಇದೀಗ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ (Final Notification) ಹೊರಡಿಸಿದೆ.
ಬಿಡದಿ ಹೋಬಳಿಯ ಹೊಸೂರು ಹಾಗೂ ಬನ್ನಿಗಿರಿ ಗ್ರಾಮಗಳ ವಿವಿಧ ಸರ್ವೇ ನಂಬರ್ಗಳಲ್ಲಿರುವ ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ಒಟ್ಟು 35 ಎಕರೆ ಜಮೀನು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದೆ. ಇದರಲ್ಲಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿರುವ 31 ಎಕರೆ ಮತ್ತು ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿರುವ 4 ಎಕರೆ ಜಮೀನಿಗೆ ಅಂತಿಮ ನೋಟಿಫಿಕೇಷನ್ ಮಾಡಲಾಗಿದೆ.
ದಾಖಲೆಗಳು ವೈರಲ್:
ಇದೇ ವಿಷಯವನ್ನು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು, ಹೆಚ್ ಡಿಕೆ ಕುಟುಂಬದ ಭೂ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ಜೆಡಿಎಸ್ ವಿರುದ್ಧ ಮುಗಿಬಿದ್ದಿದ್ದಾರೆ.
“ಜೆಡಿಎಸ್ ಕುಟುಂಬಕ್ಕೆ ರೈತರ ಮೇಲೆ ಯಾವುದೇ ನೈಜ ಕಾಳಜಿಯಿಲ್ಲ. ತಮ್ಮ ಸ್ವಂತ ಕುಟುಂಬದ 35 ಎಕರೆ ಬೆಲೆಬಾಳುವ ಜಮೀನು ಸರ್ಕಾರದ ವಶವಾಗುತ್ತದೆ ಎಂಬ ಏಕೈಕ ವೈಯಕ್ತಿಕ ಹಿತಾಸಕ್ತಿಯಿಂದ ಅವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬಡ ರೈತರ ಉದ್ದಾರಕ್ಕಾಗಿ ಅಲ್ಲ” ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ಪ್ರಸ್ತುತ ಬಿಡದಿ ಯೋಜನೆಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ರೈತರ ಹೋರಾಟದ ಪರವಾಗಿ ನಿಲ್ಲುವುದಾಗಿ ಹೇಳಿದೆ. ಆದರೆ ಕಾಂಗ್ರೆಸ್ ಮಾತ್ರ ಇದು ಸ್ವಾರ್ಥದ ಹೋರಾಟ ಎಂದು ವ್ಯಂಗ್ಯವಾಡಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇತ್ತೀಚೆಗಷ್ಟೇ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿ, “ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ಗೆ ಕೊಟ್ಟ ಭರವಸೆಯಂತೆ ಈ ಟೌನ್ಶಿಪ್ ಮಾಡಲಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಈ ಭೂ ದಾಖಲೆಗಳ ಅಧಿಸೂಚನೆ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


