ಶಿವಮೊಗ್ಗ: ಶಾಲಾ ದಾಖಲಾತಿಗಾಗಿ ವಿದ್ಯಾರ್ಥಿನಿಯ ಪೋಷಕರಿಂದ ಲಂಚಕ್ಕೆ ಬೇಡಿಕೆಯಿಟ್ಟು, ಹಣ ಸ್ವೀಕರಿಸುತ್ತಿದ್ದ ವಸತಿ ಶಾಲೆಯೊಂದರ ಪ್ರಿನ್ಸಿಪಾಲ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಹುಣಸೆಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್ ನಾಮದೇವ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಆರೋಪಿಯಾಗಿದ್ದಾರೆ.
ವಿದ್ಯಾರ್ಥಿನಿಯೊಬ್ಬಳನ್ನು ಶಾಲೆಯ 7ನೇ ತರಗತಿಗೆ ದಾಖಲಿಸಿಕೊಳ್ಳಲು ಪ್ರಿನ್ಸಿಪಾಲ್ ನಾಮದೇವ ಅವರು 20 ಸಾವಿರ ರೂಪಾಯಿ ಲಂಚ ನೀಡುವಂತೆ ಪೋಷಕರಿಗೆ ಬೇಡಿಕೆಯಿಟ್ಟಿದ್ದರು. ಶಾಲೆಗೆ ‘ಡ್ರಮ್ ಸೆಟ್’ ಖರೀದಿಸಬೇಕು ಎಂಬ ನೆಪ ಒಡ್ಡಿ ಅವರು ಈ ಲಂಚದ ಹಣವನ್ನು ಕೇಳಿದ್ದರು ಎನ್ನಲಾಗಿದೆ.
ಪ್ರಿನ್ಸಿಪಾಲ್ ಅವರ ಈ ವಿಚಿತ್ರ ಬೇಡಿಕೆಯಿಂದ ಬೇಸತ್ತ ವಿದ್ಯಾರ್ಥಿನಿಯ ಪೋಷಕರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಯೋಜನೆಯ ಪ್ರಕಾರ, ಇಂದು ಬೆಳಗ್ಗೆ ಪೋಷಕರಿಂದ 10 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಅವಧಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಹಾಗೂ ಇನ್ಸ್‌ಪೆಕ್ಟರ್ ರುದ್ರೇಶ್ ನೇತೃತ್ವದ ತಂಡವು ಆರೋಪಿ ನಾಮದೇವ ಅವರನ್ನು ಲಂಚದ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು, ವಶಕ್ಕೆ ಪಡೆದಿದೆ.
ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


