ಸರಗೂರು: ಹೆಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕು ಮಾದರ ಮಹಾಸಭಾ ತಾಲೂಕು ಘಟಕಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಗಸ್ಟ್ 8ರಂದು ಸರಗೂರು ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಮಾಜದ ಮುಖಂಡರು ಹಾಗೂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಾಲೂಕು ಮಾದರ ಮಹಾಸಭಾದ ಅಧ್ಯಕ್ಷ ಪರಶಿವಮೂರ್ತಿ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಶಿವಮೂರ್ತಿ, ಈ ಕಾರ್ಯಕ್ರಮವು ಚಿತ್ರದುರ್ಗ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಹೆಚ್.ಡಿ. ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಾಸ್ತಮ್ಮ ದೇವಸ್ಥಾನದಿಂದ ವೇದಿಕೆ ಕಾರ್ಯಕ್ರಮದವರೆಗೆ ನಡೆಯಲಿರುವ ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದು, ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ ಅವರು ಮಾದರ ಮಹಾಸಭಾ ಸಂಘವನ್ನು ಉದ್ಘಾಟಿಸಲಿದ್ದಾರೆ.
ಸರಗೂರು ತಾಲೂಕು ಅಧ್ಯಕ್ಷ ಬೆಟ್ಟಸ್ವಾಮಿ ಮಾತನಾಡಿ, ಅವಳಿ ತಾಲೂಕಿನ ಮಾದರ ಮಹಾಸಭಾ ವತಿಯಿಂದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಹಾಗೂ ವಿವಿಧ ರಂಗಗಳ ಸಾಧಕರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಮಾರಂಭದಲ್ಲಿ ಲೋಕಸಭಾ ಸದಸ್ಯ ಸುನೀಲ್ ಬೋಸ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ. ರಮೇಶ್ ಹಾಗೂ ಧರ್ಮಸೇನಾ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎರಡು ತಾಲೂಕಿನ ಸಮಾಜದ ಗಡಿಯಜಮಾನರು, ಮುಖಂಡರು, ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಅವರು ಕೋರಿದರು.
ಈ ಸುದ್ದಿಗೋಷ್ಠಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆಯ ಮಾಜಿ ಅಧ್ಯಕ್ಷ ಪಿ. ನಾಗರಾಜು, ಸರಗೂರು ತಾಲೂಕು ಮಾದರ ಮಹಾಸಭಾ ಅಧ್ಯಕ್ಷ ಬೆಟ್ಟಸ್ವಾಮಿ, ಉಪಾಧ್ಯಕ್ಷ ಉಡ ನಾಗರಾಜು, ಸರಗೂರು ಉಪಾಧ್ಯಕ್ಷ ಶಿವರಾಜು, ಪ್ರಧಾನ ಕಾರ್ಯದರ್ಶಿ ಚೆಲುವರಾಜು ಹಾಗೂ ನಿರ್ದೇಶಕ ಶಿವಯ್ಯ ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
