ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ.
ಮಂಗಳವಾರ ಸಿಸಿಬಿ (CCB) ಅಧಿಕಾರಿಗಳು ಕಾರಾಗೃಹದಲ್ಲಿ ನಡೆಸಿದ ದಿಢೀರ್ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದ್ದು, ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬ ಆರೋಪಕ್ಕೆ ಮತ್ತೆ ಪುಷ್ಟಿ ನೀಡಿದೆ.
ಅತ್ಯಾಚಾರ ಪ್ರಕರಣದ ಸಜಾ ಕೈದಿಯಾಗಿ ಪ್ರತ್ಯೇಕ ಬ್ಯಾರಕ್ ನಲ್ಲಿರುವ ಪ್ರಜ್ವಲ್ ರೇವಣ್ಣ ಬಳಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ.
ಪ್ರಜ್ವಲ್ ಗೆ ಜೈಲಿನೊಳಗೆ ಮೊಬೈಲ್ ತಂದು ಕೊಟ್ಟವರು ಯಾರು? ಅವರು ಎಷ್ಟು ದಿನಗಳಿಂದ ಫೋನ್ ಬಳಕೆ ಮಾಡುತ್ತಿದ್ದರು? ಎಂಬುದರ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಜೈಲು ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಕಾನೂನು ಕಲಂಗಳಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಇದಕ್ಕೆ ಸಹಕರಿಸಿದವರ ವಿರುದ್ಧ ಪ್ರಕರಣ (FIR) ದಾಖಲಿಸಲು ಸಿಸಿಬಿ ಮುಂದಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿದಂತೆ ಇತರ ವಿಐಪಿ ಹಾಗೂ ರೌಡಿ ಶೀಟರ್ಗಳ ಬ್ಯಾರಕ್ ಗಳಲ್ಲೂ ಸಿಸಿಬಿ ತನಿಖಾ ತಂಡ ಪರಿಶೀಲನೆ ನಡೆಸಿದೆ. ಆದರೆ ದರ್ಶನ್ ಬ್ಯಾರಕ್ನಲ್ಲಿ ಯಾವುದೇ ನಿಷೇಧಿತ ವಸ್ತುಗಳು ಅಥವಾ ಫೋನ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
