ಮಂಡ್ಯ: ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಮೇಲೆ ಶಾಸಕರ ಪುತ್ರಿಯೊಬ್ಬರು ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದ್ದು, ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ (ಆ.12) ಭೀಮನ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಆರತಿ ಉಕ್ಕಡದ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು. ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದ್ದ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ, ಪ್ರಭಾವ ಬಳಸಿ ವಿಐಪಿ ಸಾಲಿನಲ್ಲಿ ಪ್ರವೇಶ ಪಡೆದು ನೇರವಾಗಿ ಗರ್ಭಗುಡಿಯೊಳಗೆ ಹೋಗಲು ಯತ್ನಿಸಿದ್ದಾರೆ.
ಭದ್ರತಾ ಕರ್ತವ್ಯದಲ್ಲಿದ್ದ ಕ್ಯಾತನಹಳ್ಳಿ ಪೊಲೀಸ್ ಠಾಣೆಯ ಪಿಎಸ್ ಐ ಸವಿತಾ, “ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಈಗ ಯಾರನ್ನೂ ಗರ್ಭಗುಡಿಯೊಳಗೆ ಬಿಡಲು ಸಾಧ್ಯವಿಲ್ಲ” ಎಂದು ಐಶ್ವರ್ಯ ಅವರನ್ನು ತಡೆದಿದ್ದಾರೆನ್ನಲಾಗಿದೆ, ಇದೇ ಸಮಯದಲ್ಲಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್ (CI) ಲಕ್ಷ್ಮಿ ಅವರು ಗರ್ಭಗುಡಿಯ ಕಡೆಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಐಶ್ವರ್ಯ, “ಅವರನ್ನು ಹೇಗೆ ಒಳಗಡೆ ಬಿಟ್ಟಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪಿಎಸ್ ಐ ಸವಿತಾ, “ಅವರು ನಮ್ಮ ಸರ್ಕಲ್ ಇನ್ಸ್‌ಪೆಕ್ಟರ್, ಡ್ಯೂಟಿಯಲ್ಲಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
“ನನಗೂ ಒಳಗಡೆ ಹೋಗಲು ಬಿಡಿ, ನಾನು ಹೋಗಲೇಬೇಕು” ಎಂದು ಪಟ್ಟು ಹಿಡಿದ ಐಶ್ವರ್ಯ ಮತ್ತು ಪಿಎಸ್ ಐ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಐಶ್ವರ್ಯ ಅವರು ಕರ್ತವ್ಯನಿರತ ಪಿಎಸ್ ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕರ ಪುತ್ರಿ ಐಶ್ವರ್ಯ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
