ಹೊಳೆನರಸೀಪುರ: ಇದು ಜನ ವಾಸಿಸುವ ಬಡಾವಣೆಯೋ ಅಥವಾ ಪುಂಡ–ಪೋಕರಿಗಳ ಅಘೋಷಿತ ‘ಓಪನ್ ಬಾರ್’ ಎಂಬ ಅನುಮಾನ ಪಟ್ಟಣದ 17ನೇ ವಾರ್ಡ್‌ನ ಅನ್ವರ್ ಪಾಷ ಲೇಔಟ್ (ಕೋಡಂಗಿ ಕೊಪ್ಪಲು) ನಿವಾಸಿಗಳನ್ನು ತೀವ್ರವಾಗಿ ಕಾಡುತ್ತಿದೆ. ಒಂದೆಡೆ ಸತ್ತ ಪ್ರಾಣಿಗಳ ದುರ್ನಾತ, ಇನ್ನೊಂದೆಡೆ ಕುಡುಕರ ಅಟ್ಟಹಾಸ – ಇವೆಲ್ಲದರ ನಡುವೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯಲ್ಲೇ ಎಣ್ಣೆ ಪಾರ್ಟಿ, ಬೆದರಿದ ನಿವಾಸಿಗಳು
ಸೂರ್ಯ ಮುಳುಗುತ್ತಿದ್ದಂತೆ ಈ ಬಡಾವಣೆಯ ಬೀದಿಗಳು ಹಾಗೂ ಖಾಲಿ ನಿವೇಶನಗಳು ಮದ್ಯಪ್ರಿಯರ ಸಾಮ್ರಾಜ್ಯವಾಗಿ ಬದಲಾಗುತ್ತಿವೆ. ಗುಂಪು ಗುಂಪಾಗಿ ಕುಳಿತು ಮದ್ಯಪಾನ ಮಾಡುವುದು ಮತ್ತು ಕುಡಿದ ಅಮಲಿನಲ್ಲಿ ರಸ್ತೆಯಲ್ಲೇ ಹುಚ್ಚೆದ್ದು ಕುಣಿಯುವುದು ಇಲ್ಲಿ ನಿತ್ಯದ ಕಾಯಕವಾಗಿದೆ.
ಕುಡಿತದ ಮತ್ತಿನಲ್ಲಿ ನಡೆಯುವ ಗಲಾಟೆಗಳು ಹಾಗೂ ಹಾರಾಡುವ ಅಶ್ಲೀಲ ಶಬ್ದಗಳಿಂದಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಬೆಚ್ಚಿಬೀಳುವಂತಹ ಭೀಕರ ವಾತಾವರಣ ನಿರ್ಮಾಣವಾಗಿದೆ.
ಕಸದ ಗಾಡಿಯಲ್ಲೇ ಎಣ್ಣೆ ಬಾಟಲಿಗಳ ಸಾಗಾಟ!
ಬಡಾವಣೆಯಲ್ಲಿ ನಡೆಯುತ್ತಿರುವ ಈ ರಂಪಾಟಕ್ಕೆ ಪುರಸಭೆಯ ಸ್ವಚ್ಛತಾ ವಾಹನವೇ ಜೀವಂತ ಸಾಕ್ಷಿಯಾಗಿದೆ. ಪುರಸಭೆಯ ಕಸದ ವಾಹನಗಳು ಪ್ರತಿನಿತ್ಯ ಬಡಾವಣೆಗೆ ಬಂದಾಗ, ಮನೆಗಳ ಕಸಕ್ಕಿಂತ ಹೆಚ್ಚಾಗಿ ಪುಂಡರು ಕುಡಿದು ಬಿಸಾಡಿದ ನೂರಾರು ಮದ್ಯದ ಬಾಟಲಿಗಳನ್ನೇ ಎತ್ತಿಕೊಂಡು ಹೋಗುವ ದಯನೀಯ ಸ್ಥಿತಿ ಇದೆ. ಇಷ್ಟಾದರೂ ಪುರಸಭೆಯ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಈ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕನಿಷ್ಠ ಸೌಜನ್ಯ ತೋರುತ್ತಿಲ್ಲ.
ಬಡಾವಣೆಯಲ್ಲಿರುವ ಖಾಲಿ ಸೈಟುಗಳು ಕೇವಲ ಕುಡುಕರ ಅಡ್ಡೆಯಷ್ಟೇ ಅಲ್ಲದೆ, ಸತ್ತ ಪ್ರಾಣಿಗಳನ್ನು ಎಸೆಯುವ ಡಂಪಿಂಗ್ ಯಾರ್ಡ್ ಆಗಿ ಬದಲಾಗಿವೆ. ಸತ್ತ ನಾಯಿಗಳು ಹಾಗೂ ಇತರ ಪ್ರಾಣಿಗಳ ಕಳೇಬರಗಳನ್ನು ಇಲ್ಲಿ ತಂದು ಅವೈಜ್ಞಾನಿಕವಾಗಿ ಹೂಳಲಾಗುತ್ತಿದ್ದು, ಇಡೀ ಪ್ರದೇಶ ಗಬ್ಬು ನಾರುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಕಣ್ಣೆದುರಲ್ಲೇ ಇದ್ದರೂ ಪುರಸಭೆಯ ಆರೋಗ್ಯಾಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
“ಪುರಸಭೆ ಹಾಗೂ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಅನ್ವರ್ ಪಾಷ ಲೇಔಟ್‌ನಲ್ಲಿ ಸ್ವಚ್ಛತೆ ಕಾಪಾಡಬೇಕು. ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಿ ಕಾಂಪೌಂಡ್ ಹಾಕಿಸಬೇಕು ಮತ್ತು ಪುಂಡರ ಹಾವಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಪೊಲೀಸ್ ಗಸ್ತು ನಿಯೋಜಿಸಬೇಕು. ತಪ್ಪಿದ್ದಲ್ಲಿ ಬಡಾವಣೆಯ ನಿವಾಸಿಗಳೊಂದಿಗೆ ಪುರಸಭೆ ಹಾಗೂ ಪೊಲೀಸ್ ಠಾಣೆಯ ಎದುರು ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ನೈಟ್ ಬೀಟ್ ಇಲ್ಲ:
ಬಡಾವಣೆಯಲ್ಲಿ ಇಷ್ಟೆಲ್ಲಾ ಅರಾಜಕತೆ ತಾಂಡವವಾಡುತ್ತಿದ್ದರೂ, ಪೊಲೀಸ್ ಇಲಾಖೆಯ ರಾತ್ರಿ ಗಸ್ತು (ನೈಟ್ ಬೀಟ್) ಈ ಪ್ರದೇಶದತ್ತ ಸುಳಿಯುತ್ತಲೇ ಇಲ್ಲ. ಪೊಲೀಸರು ಕೇವಲ ಠಾಣೆಗಷ್ಟೇ ಸೀಮಿತರಾಗಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
