ಹೊಳೆನರಸೀಪುರ / ಹಳ್ಳಿಮೈಸೂರು: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಹಳ್ಳಿಮೈಸೂರಿನ ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲೇ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಅವರು, ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹಳ್ಳಿಮೈಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಅಭಾವದಿಂದ ರೋಗಿಗಳು ಪರದಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಸಂಸದರು ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೇವೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದ ನಂತರ, ಸ್ಥಳದಿಂದಲೇ ಹಾಸನ ಜಿಲ್ಲಾ ಆರೋಗ್ಯ ಅಧಿಕಾರಿ (DHO) ಡಾ. ಮನೋಹರ್ ಅವರಿಗೆ ದೂರವಾಣಿ ಕರೆ ಮಾಡಿ ಹಲವು ಸೂಚನೆಗಳನ್ನು ನೀಡಿದರು.
ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ತಕ್ಷಣವೇ ಹೆಚ್ಚುವರಿ ವೈದ್ಯರನ್ನು ನಿಯೋಜಿಸಬೇಕು. ಹೆರಿಗೆ ವಿಭಾಗಕ್ಕೆ ಪ್ರತ್ಯೇಕ ವೈದ್ಯರನ್ನು ತಕ್ಷಣವೇ ನೇಮಕ ಮಾಡಬೇಕು. ರಾತ್ರಿ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಲಭ್ಯವಿರಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಹೈಟೆಕ್’ ಬಸ್ ನಿಲ್ದಾಣ:
ಆಸ್ಪತ್ರೆಯ ಪರಿಶೀಲನೆಯ ನಂತರ ಬಸ್ ನಿಲ್ದಾಣದ ಅವ್ಯವಸ್ಥೆ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ವೀಕ್ಷಿಸಲು ಸಂಸದರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದರು. ಇದೇ ವೇಳೆ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದ ಅವರು: ಕೆಎಸ್ ಆರ್ ಟಿಸಿ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ (DC) ಕರೆ ಮಾಡಿ, ಲಭ್ಯವಿರುವ ಅನುದಾನ ಬಳಸಿ ಬಸ್ ನಿಲ್ದಾಣಕ್ಕೆ ತಕ್ಷಣವೇ ಡಾಂಬರೀಕರಣ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳಲು ಆದೇಶಿಸಿದರು.
ಸರ್ಕಾರದಿಂದ ಹೆಚ್ಚುವರಿ ಅನುದಾನ ತಂದು ಹಳ್ಳಿಮೈಸೂರು ಬಸ್ ನಿಲ್ದಾಣವನ್ನು ಅತ್ಯಾಧುನಿಕ ‘ಹೈಟೆಕ್ ಮಾದರಿ’ಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷ ಮಧು, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಲೋಕೇಶ್, ಯುವ ಮುಖಂಡ ಪ್ರದೀಪ್ ಕುಮಾರ್, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಭರತ್, ಮುಖಂಡರಾದ ನಿಂಗೇಗೌಡ, ರೇವಣ್ಣ, ವಿನು, ಸೋಮಶೇಖರ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
