ಶಿವಮೊಗ್ಗ: ನೇಪಾಳದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಸಂಕಷ್ಟದ ಪರಿಸ್ಥಿತಿಯ ನಡುವೆಯೂ, ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ 6 ಜನ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂಬ ಸಮಾಧಾನಕರ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗದ ಗುರುಶಾಂತೇಶ್ವರ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವತಿಯಿಂದ ಈ ಆರು ಮಂದಿ ಪ್ರವಾಸಕ್ಕೆ ತೆರಳಿದ್ದರು. ಬೆಂಗಳೂರಿನಿಂದ ವಿಮಾನದ ಮೂಲಕ ಉತ್ತರ ಪ್ರದೇಶದ ಗೋರಖ್ಪುರ ತಲುಪಿದ್ದ ಈ ತಂಡ, ಅಲ್ಲಿಂದ ಟೂರ್ ಪ್ಯಾಕೇಜ್ ಮೂಲಕ ಬಸ್ನಲ್ಲಿ ನೇಪಾಳಕ್ಕೆ ಪ್ರಯಾಣ ಬೆಳೆಸಿತ್ತು.
ಈ ತಂಡದಲ್ಲಿ ಹೊಸನಗರದ ಇಬ್ಬರು, ಭದ್ರಾವತಿಯ ಇಬ್ಬರು ಹಾಗೂ ಶಿವಮೊಗ್ಗದ ಇಬ್ಬರು ಸೇರಿ ಒಟ್ಟು 6 ಜನರಿದ್ದರು. ನೇಪಾಳದಲ್ಲಿ ಪ್ರವಾಹ ಉಂಟಾಗುವ ಮುನ್ನವೇ ಇವರು ಪ್ರಮುಖ ಸ್ಥಳಗಳನ್ನು ವೀಕ್ಷಿಸಿದ್ದರು. ತಂಡವು ನೇಪಾಳದ ಲುಂಬಿನಿ ಸೇರಿದಂತೆ ಇತರೆ ಪ್ರವಾಸಿ ತಾಣಗಳನ್ನು ಮುಗಿಸಿ ಮುಂದಿನ ಸ್ಥಳಕ್ಕೆ ಹೊರಡಬೇಕಿತ್ತು. ಆದರೆ, ಪ್ರವಾಹ ಪೀಡಿತ ಸ್ಥಳಕ್ಕೆ ತಲುಪುವ ಸುಮಾರು 5 ಕಿ.ಮೀ ದೂರದಲ್ಲೇ ಅಧಿಕಾರಿಗಳು ಇವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ.
ಈ ಕುರಿತು ಹೊಸನಗರದ ವಕೀಲ ಪ್ರಶಾಂತ್ ‘ಇಟಿವಿ ಭಾರತ’ದೊಂದಿಗೆ ಮಾತನಾಡಿ, “ನಾವೀಗ ನೇಪಾಳದ ದಕ್ಷಿಣ ಭಾಗದಲ್ಲಿದ್ದೇವೆ. ಪೋರ್ಖಾದಿಂದ ಕಠ್ಮಂಡುವಿಗೆ ಹೋಗಬೇಕಿತ್ತು. ಆದರೆ ಅಲ್ಲಿನ ಸರ್ಕಾರ ನಮ್ಮನ್ನು ತಡೆಯಿತು. ಇದರಿಂದ ನಾವು ನಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಆಗುತ್ತಿದ್ದೇವೆ. ಲುಂಬಿನಿ ಮೂಲಕ ಭಾರತದ ಗಡಿ ಪ್ರವೇಶಿಸುತ್ತಿದ್ದೇವೆ. ನಮ್ಮ ಒಟ್ಟು ತಂಡದಲ್ಲಿ 54 ಜನರಿದ್ದು, ಎಲ್ಲರೂ ಸಂಪೂರ್ಣ ಸುರಕ್ಷಿತವಾಗಿದ್ದೇವೆ. ಯಾವುದೇ ಅಡೆತಡೆಗಳಿಲ್ಲದೆ ವಾಪಸ್ ಬರುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ನೇಪಾಳ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಮತ್ತು ಮಾಹಿತಿ ಪಡೆಯಲು ರಾಜ್ಯ ಸರ್ಕಾರವು 24×7 ತುರ್ತು ಸಹಾಯವಾಣಿಯನ್ನು (SEOC) ತೆರೆದಿದೆ.
ಟೋಲ್ ಫ್ರೀ ಸಂಖ್ಯೆ: 1070 ಹಾಗೂ 080-22253707
ಇಮೇಲ್ ವಿಳಾಸ: seockarnataka@gmail.com
ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರು ಈ ನಂಬರ್ ಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
