ಬೆಂಗಳೂರು: ರಾಜ್ಯ ಸರ್ಕಾರವು ಕಾಟಾಚಾರಕ್ಕೆ ಹಾಗೂ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ನಾಲ್ಕು ತಿಂಗಳ ಬಳಿಕ ಬರಗಾಲ ಘೋಷಣೆ ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಸಂಕಷ್ಟವಿರುವ 101 ತಾಲೂಕುಗಳ ಬದಲಾಗಿ ಒಟ್ಟು 175 ತಾಲೂಕುಗಳಲ್ಲಿ ಬರ ಘೋಷಿಸಬೇಕಿತ್ತು. ಆದರೆ ಸರ್ಕಾರದ ಬಳಿ ಹಣದ ಕೊರತೆ ಇರುವುದರಿಂದ ತಾಲೂಕುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಸರ್ಕಾರ ಕೇವಲ 89 ತಾಲೂಕುಗಳಲ್ಲಿ ತೀವ್ರ ಹಾಗೂ 12 ತಾಲೂಕುಗಳಲ್ಲಿ ಕಡಿಮೆ ಬರ ಎಂದು ಘೋಷಿಸಿದ್ದು, ಇದು ಸಾಕಾಗುವುದಿಲ್ಲ. ಕೂಡಲೇ 175 ತಾಲೂಕುಗಳನ್ನು ಬರಪೀಡಿತ ಎಂದು ಪರಿಗಣಿಸಬೇಕು ಎಂದು ಒತ್ತಾಯ ಮಾಡಿದರು.
ಮುಖ್ಯಮಂತ್ರಿಗಳು ಸಾಲ ಮನ್ನಾ ಬಗ್ಗೆ ಮಾತನಾಡಿ ಎರಡು ತಿಂಗಳು ಕಳೆದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ರೈತನ ಕನಿಷ್ಠ 1 ಲಕ್ಷ ರೂ. ತನಕದ ಸಾಲವನ್ನು ತಕ್ಷಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಬರಪೀಡಿತ ಒಂದು ತಾಲೂಕಿಗೆ ಕೇವಲ 1 ಕೋಟಿ ರೂ. ನೀಡುವುದು ಹಾಸ್ಯಾಸ್ಪದ. ಎಕರೆಗೆ 50,000 ರೂ. ಪರಿಹಾರ ನೀಡಬೇಕೆಂಬ ನಮ್ಮ ಬೇಡಿಕೆಯನ್ನು ಸರ್ಕಾರ ಕಡೆಗಣಿಸಿದೆ. ಕಲಬುರಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಜನ ಹಾಗೂ ವಿದ್ಯಾರ್ಥಿಗಳು ಗುಳೆ ಹೋಗುತ್ತಿದ್ದಾರೆ. ಇವರ ರಕ್ಷಣೆ ಮತ್ತು ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.
ರೈತರ ಪ್ರತಿಭಟನೆಗಳ ಒತ್ತಡಕ್ಕೆ ಮಣಿದು ಸರ್ಕಾರ ಕೇವಲ ಔಪಚಾರಿಕವಾಗಿ ಬರ ಘೋಷಣೆ ಮಾಡಿದೆ ಹೊರತು ರೈತಪರ ನಿಜವಾದ ಕಾಳಜಿ ತೋರುತ್ತಿಲ್ಲ ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
