ಸಿರಾ: ಸಾಹಿತ್ಯ ಬರವಣಿಗೆ ಬಹಳ ಸುಲಭ ಅಂದುಕೊಳ್ಳುವ ಬಹುತೇಕರು ಸಾಹಿತ್ಯದ ಗಟ್ಟಿತನದ ಕಸುವನ್ನು ಕಲಿತು ಕೊಳ್ಳುವ ಅಗತ್ಯವಿದೆ. ಹೊಸದಾಗಿ ಬರೆಯುವವರಿಗೆ ಸಾಹಿತ್ಯ ರಚನೆ ಸುಲಭ ಅನಿಸಬಹುದಾದರೂ ಅನುಭವ, ಅಧ್ಯಯನ ಹಾಗೂ ಅಭಿವ್ಯಕ್ತಿಗಳು ಒಟ್ಟುಗೂಡಿದಾಗ ಮಾತ್ರ ಉತ್ತಮ ಗುಣಮಟ್ಟದ ಸಾಹಿತ್ಯ ರಚನೆಯು ಸಾಧ್ಯವಾಗುತ್ತದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ಅವರು ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಶಾಂತಿನಿಕೇತನ ಶಾಲೆಯಲ್ಲಿ ಭಾನುವಾರ ಸಾಹಿತ್ಯ ಸಂವಾದದಲ್ಲಿ ದೀಕ್ಷಾ ಜಿ ಭಾಷಣ ಮಾಡಿದರು.
ಬರೆಯುವುದು ಒಂದು ಕೃಷಿ, ಮಳೆ ಬಂದರೆ ಕೃಷಿ ಚೆನ್ನಾಗಿ ಆಗುತ್ತೆ. ಬರೆದದ್ದೆಲ್ಲವೂ ಸಾಹಿತ್ಯ ಅನ್ನುವ ಭ್ರಮೆಯಿಂದ ಬದುಕಿನಿಂದ ಬರಹಗಾರರು ಹೊರಬಾರದಿದ್ಧಲ್ಲಿ ಉತ್ತಮ ಸಾಹಿತ್ಯವನ್ನು ಈ ನಾಡಿಗೆ ಕಟ್ಟಿಕೊಡಲು ಕಷ್ಟ ಸಾಧ್ಯ. ಬರಹಗಾರರಿಗೆ ಸೃಜನಶೀಲತೆಯು ಅಗತ್ಯವಿದೆ. ಒಂದು ಘಟನೆ ನಿರೂಪಿಸಿದರೆ ಅದು ಕಥೆಯಾಗುವುದಿಲ್ಲ ಅದೊಂದು ಪತ್ರಿಕಾ ವರದಿಯಾಗುತ್ತದೆ. ಕಥೆಗಾರರು ಕಥೆಗಳನ್ನು ಬರೆಯುವಾಗ ನಿರೂಪಣಾ ವಿಧಾನ, ಕಥೆಯ ಸಾಂಕೇತಿಕ ಹಾಗೂ ಭಾಷೆಯ ಮೇಲಿನ ಹಿಡಿತವಿಬೇಕಾಗುತ್ತದೆ ಎಂದರು.
ಬೇಂದ್ರೆಯವರ ಕುರುಡು ಕಾಂಚಾಣ, ಕುವೆಂಪು ಅವರ ಪಕ್ಷಿಕಾಶಿಯಂತಹ ಬಹಳಷ್ಟು ಬರಹಗಳನ್ನು ನಾನಾ ರೀತಿಯಲ್ಲಿ ವಿಮರ್ಶೆಗೊಳಪಡಿಸಿದವಿಮರ್ಶಕರಿಂದ ಅಂತಹ ವಿಮರ್ಶೆಗಳು ಪೂರ್ವಗ್ರಹವಿಲ್ಲದೆ ಪ್ರವೇಶಿಸಬೇಕು. ಈ ತಾಲೂಕಿನಲ್ಲಿ ಅನೇಕ ಬರಹಗಾರರಿದ್ದು, ಅನೇಕ ಮಂದಿ ಓದಿಕೊಂಡು ಅಧ್ಯಯನಶೀಲರೂ ಆಗಿದ್ದು, ಅಂತಹವರಿಗೊಂದು ಸಾಹಿತ್ಯ ಸಂವಾದದ ಕಾರ್ಯಕ್ರಮ ಇದಾಗಿದೆ ಎಂದರು.
ಸಾಹಿತಿ ಭುವನಹಳ್ಳಿ ನಾಗರಾಜ್ ಮಾತನಾಡಿ, ಬರವಣಿಗೆ ಎಂಬುದು ಕೇವಲ ಮನರಂಜನೆ ಅಥವಾ ಕಲ್ಪನೆಯಲ್ಲ, ಅದು ಬದುಕಿನ ಕನ್ನಡಿ ಮತ್ತು ಸಮಾಜವನ್ನು ಬದಲಾಯಿಸುವ ಅಸ್ತ್ರ, ಆದ್ದರಿಂದಲೇ ಕೃತಕವಾಗಬಾರದು, ಬದುಕಿಗೆ ಹತ್ತಿರವಾಗಿರಬೇಕು. ಬರಹ ಮತ್ತು ಬದುಕೂಗಳಿಗೆ ಹೊಂದಾಣಿಕೆಯಿರಬೇಕು ಎಂದು ತಿಳಿಸಿದರು.
ಕಾವ್ಯ ಗುಲ್ಬರ್ಗ ಕೇಂದ್ರಿಯ ವಿವಿ ಸಹ ಪ್ರಾಧ್ಯಾಪಕ ಡಾ.ಕಿರಣ್ ಗಾಜನೂರು ಸಾಹಿತ್ಯ, ಸೃಜನಶೀಲತೆ ಹಾಗೂ ಸಾಮಾಜಿಕ ಜವಾಬ್ದಾರಿ ಕುರಿತು ಹಾಗೂ ಚಿತ್ರದುರ್ಗ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕರಿಯಪ್ಪ ಮಾಳಿಗೆ ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನ ಪ್ರಶ್ನೆ ಕುರಿತು ವಿಷಯ ಮಂಡನೆ ಮಾಡಿದರು. ತಾ.ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ಶೈಲಾ ನಾಗರಾಜ್, ನಾಗಭೂಷಣ್ ಬಗ್ಗನಡು, ರೂಪೇಶ್ ಕೃಷ್ಣಯ್ಯ, ಶಿವಣ್ಣ ಯಂದೋರೆ, ನರೇಶ್ ಬಾಬು ಸೇರಿದಂತೆ ಅನೇಕ ಪ್ರಮುಖರು ಇದ್ದರು.
ಒಂದು ಕವಿತೆ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಕವಿತೆ ರಚನೆಗೊಳಿಸಿ ಅದನ್ನು ತಿದ್ದಿ, ತೀಡಿ ಅದುಕೊಂಡು ರೂಪ ಕೊಡಬೇಕಾದರೆ ಕನಿಷ್ಠ ಪಕ್ಷ ಒಂದು ವಾರವಾದರೂ ಬೇಕು. ಎರಡು ಮೂರು ಪುಟಗಳ ಒಂದು ಲೇಖನ ಬರೆಯಲು ನಾನೂ ಕೂಡ ಕನಿಷ್ಠ ಪಕ್ಷ 15 ದಿನಗಳನ್ನಾದರೂ ತೆಗೆದುಕೊಂಡು ಯೋಚಿಸುತ್ತೇನೆ. ಒಂದು ಚಿಂತನೆ, ಒಂದು ಅಧ್ಯಯನವಿಲ್ಲದೆ ಒಂದು ಪ್ರಾస ಜೋಡಿಸಿದರೆ ಕವಿತೆಯಾಗುತ್ತದೆ ಎನ್ನುವಂತಹ ಹಲವು ಭ್ರಮೆಗಳಿಂದ ಬರಹಗಾರರು ಹೊರಬರಬೇಕು.
— ಬರಗೂರು ರಾಮಚಂದ್ರಪ್ಪ, ಚಿಂತಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
