ಪಾವಗಡ : ಮಹರ್ಷಿ ವಾಲ್ಮೀಕಿ ಆಶ್ರಮ, ವಾಲ್ಮೀಕಿ ಜಾಗೃತಿ ವೇದಿಕೆ, ನಿಡಗಲ್ಲು ಗ್ರಾಮಸ್ಥರು ಹಾಗೂ ನಿಡಗಲ್ಲು ದುರ್ಗದ ಅಭಿಮಾನಿಗಳ ವತಿಯಿಂದ 10ನೇ ವರ್ಷದ ನಿಡಗಲ್ಲು ಉತ್ಸವ–2026 ಅನ್ನು ನಿಡಗಲ್ಲು ದುರ್ಗದ ರಾಮತೀರ್ಥದ ಬಳಿ ಅದ್ದೂರಿಯಾಗಿ ಆಚರಿಸಲಾಯಿತು.
ಡೋಲು ಬಾರಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಸರ್ಕಾರವೇ ಪ್ರತಿವರ್ಷ ನಿಡಗಲ್ಲು ಉತ್ಸವವನ್ನು ಆಚರಿಸಬೇಕು. ಐತಿಹಾಸಿಕ ನಿಡಗಲ್ಲು ದುರ್ಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ತಮ್ಮ ಶಾಸಕಾವಧಿಯಲ್ಲಿ ನಿಡಗಲ್ಲು ದುರ್ಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗಿತ್ತು. ಮುಂದಿನ ದಿನಗಳಲ್ಲಿ ವಾಲ್ಮೀಕಿ ಆಶ್ರಮದ ಅಭಿವೃದ್ಧಿಗೆ ಸಂಸದರ ನಿಧಿಯಿಂದಲೂ ಸಹಕಾರ ಕೊಡಿಸುವುದಾಗಿ ಭರವಸೆ ನೀಡಿದರು.
ತುಮಕೂರು ನಗರಸಭೆ ಮಾಜಿ ಮಹಾಪೌರ ಹಾಗೂ ವಾಲ್ಮೀಕಿ ಬ್ಯಾಂಕ್ ಅಧ್ಯಕ್ಷ ಬಿ.ಜಿ. ಕೃಷ್ಣಪ್ಪ ಮಾತನಾಡಿ, ವಾಲ್ಮೀಕಿ ಆಶ್ರಮದ ಭವನದ ಮುಂದುವರಿದ ಕಾಮಗಾರಿಗೆ ವೈಯಕ್ತಿಕವಾಗಿ ಹಾಗೂ ಬ್ಯಾಂಕ್ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ದಿವ್ಯಸಾನಿಧ್ಯ ವಹಿಸಿದ್ದ ವಾಲ್ಮೀಕಿ ಸಂಜಯಕುಮಾರಾನಂದ ಸ್ವಾಮೀಜಿ ಮಾತನಾಡಿ, ಕಳೆದ 10 ವರ್ಷಗಳಿಂದ ನಿಡಗಲ್ಲುಈ ಉತ್ಸವವನ್ನು ನಿರಂತರವಾಗಿ ಆಚರಿಸಿಕೊಂಡು ಬರುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಸೂಕ್ತ ಗಮನ ಹರಿಸದಿರುವುದು ಬೇಸರದ ಸಂಗತಿ ಎಂದರು.
ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದಲೇ ನಿಡಗಲ್ಲು ಉತ್ಸವ ಆಚರಿಸಲು ಹಾಗೂ ವಾಲ್ಮೀಕಿ ಆಶ್ರಮದ ಅಭಿವೃದ್ಧಿಗೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉತ್ಸವಕ್ಕೆ ಶಾಸಕರು ಗೈರಾಗಿರುವುದಕ್ಕೂ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಶ್ರೀ ಲೋಕೇಶ್ ಪಾಳೇಗಾರ್ ವಹಿಸಿದ್ದರು.
ಪಾಳೇಗಾರರ ಉಪಸ್ಥಿತಿಗೆ ವಿಶೇಷ ಮೆರಗು:
ವಿವಿಧ ಸಂಸ್ಥಾನಗಳ ಪಾಳೇಗಾರ ವಂಶಸ್ಥರು ಉತ್ಸವದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದಿತು. ಚಿತ್ರದುರ್ಗದ ದೊಡ್ಡ ಮದಕರಿ ನಾಯಕ ವಂಶಸ್ಥರಾದ ರಾಜ ಪ್ರಸನ್ನ ನಾಯಕ, ರಾಜ ಯಲ್ಲಪ್ಪ ನಾಯಕ ಸಂಸ್ಥಾನದ ದೊರೆ ಪಾಳೇಗಾರ ರಾಜ ಜಯಚಂದ್ರ ರಾಜು, ನಾಯಕನಹಟ್ಟಿ ಸಂಸ್ಥಾನದ ಪಾಳೇಗಾರ ರಾಜಾ ರುದ್ರಮುನಿ ಪಾಳೇಗಾರ್, ಕಣ್ಕುಪ್ಪೆ ಸಂಸ್ಥಾನದ ಪಾಳೇಗಾರ ರಾಜ ತಿಪ್ಪೇಶ್ ಪಾಳೇಗಾರ್ ಹಾಗೂ ಹೊಸದುರ್ಗ ಸಂಸ್ಥಾನದ ಪಾಳೇಗಾರ ರಾಜ ಶ್ರೀಧರ್ ನಾಯಕ ಉಪಸ್ಥಿತರಿದ್ದರು.
ನಿಡಗಲ್ಲು ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮದಿಂದ ವಿವಿಧ ಕಲಾತಂಡಗಳೊಂದಿಗೆ ರಾಮತೀರ್ಥದವರೆಗೆ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಉತ್ಸವಕ್ಕೆ ಮತ್ತಷ್ಟು ಕಳೆ ತಂದವು. ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿದವು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಯಲಾಟ ಅಕಾಡೆಮಿ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಡಿ. ನಾಗರಾಜು ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ್, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್ ನಾಯಕ, ಜಿಲ್ಲಾ ನಾಯಕ ಸಂಘದ ಪದಾಧಿಕಾರಿಗಳಾದ ಜಯರಾಮ್, ಎನ್. ಅನಿಲ್ ಕುಮಾರ್, ಆರ್ಟಿಒ ತಿಪ್ಪೇಸ್ವಾಮಿ, ನಾಗರಾಜ್, ಕೆ.ಆರ್ ನಾಗೇಶ್ ಕೊತ್ತೂರು, ಸೊಗಡು ವೆಂಕಟೇಶ್, ಎನ್.ಎ. ಈರಣ್ಣ, ಪಿಡಿಒ ಚಿಕ್ಕಣ್ಣ, ಡಿಎಸ್ಎಸ್ನ ಸಿ.ಕೆ. ತಿಪ್ಪೇಸ್ವಾಮಿ, ರಾಜ್ಯ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ, ಮುಖಂಡರಾದ ವೆಂಕಟೇಶ್, ಸಮಾಜ ಸೇವಕ ಚೇತನ್ ಬಾಬು, ನರಸಿಂಹ ಕೃಷ್ಣ, ನರಸಿಂಹಮೂರ್ತಿ, ಟಿ.ಪಿ. ನರಸಿಂಹ, ನಿಡಗಲ್ಲಿನ ರಾಮಪ್ಪ, ಕಾಮರಾಜ್, ಮಹಾರಾಜ್, ಪಾಲಾಕ್ಷ, ಪಟೇಲ್ ಹನುಮಂತರಾಯ, ಹೋಮ ನಾಗರಾಜು, ಬಲರಾಮ್, ತಿಮ್ಮಯ್ಯ, ಮಲ್ಲಿಕಪ್ಪ, ಗಿರಿಜಾ ಶಿವಣ್ಣ, ನಿವೃತ್ತ ಸೈನಿಕ ಅನಂತ್, ಶ್ರೀಧರ್, ಪಾವಗಡ ಪ್ರಕಾಶ್, ರಂಗಮ್ಮ ಶಿವಕುಮಾರ್, ಅಂಬಿಕಾ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
