ತುಮಕೂರು: ಸೇವಾ ವಿಷಯಗಳು, ಆಡಳಿತ ಮತ್ತು ಆರ್ಥಿಕ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಹ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೆ.21 ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕ್ಷೇಮಾಭಿವೃದ್ಧಿ ಸಂಘ ಸಚಿವರಿಗೆ ಪತ್ರ ಬರೆದಿದೆ.
ಪಿಡಿಒ ಹುದ್ದೆಗಳನ್ನು ಬಿ ಹುದ್ದೆಗಳಾಗಿ ಉನ್ನತೀಕರಿಸಬೇಕು. ವಿಳಂಬವಿಲ್ಲದೆ ಭಡ್ತಿ ನೀಡಬೇಕು. ಗ್ರಾ.ಪಂ.ಗಳಿಗೆ ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು, ಮೂಲ ಸೌಕರ್ಯ ನಿರ್ವಹಣೆಗೆ ಅಗತ್ಯ ಆರ್ಥಿಕ ನೆರವು ಒದಗಿಸಬೇಕು, ಕುಡಿಯುವ ನೀರು ನೈರ್ಮಲ್ಯ ಸೇವೆಗಳಿಗೆ ರಾಜ್ಯ ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂಬ ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಿ ಪತ್ರ ಬರೆಯಲಾಗಿದೆ.
ವಿಬಿಜಿ ರಾಮ್ ಜೀ ಯೋಜನೆಯನ್ನು ನಿಯಮಬಾಹಿರವಾಗಿ ಹಾಗೂ ಒತ್ತಾಯಪೂರ್ವಕವಾಗಿ ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು. ಯೋಜನೆಯ ಅನುಷ್ಠಾನಕ್ಕೆ ಸ್ಪಷ್ಟ ಮಾರ್ಗಸೂಚಿ ಕಾರ್ಯವಿಧಾನ, ಮಾದರಿ ಅಂದಾಜು ಪಟ್ಟಿ, ಅಧಿಕಾರಿಗಳ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ಇ-ಸ್ವತ್ತು ತಂತ್ರಾಂಶದಲ್ಲಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಿ ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯೊಳಗೆ ಸೇವೆ ಒದಗಿಸಲು ಅನುಕೂಲ ಕಲ್ಪಿಸಬೇಕು.
ಈ ಹಿನ್ನೆಲೆಯಲ್ಲಿ 21 ರಿಂದ ಮೂರು ದಿನಗಳ ಕಾಲ ಆಯಾ ಜಿಲ್ಲಾ ಪಂಚಾಯತಿ ಕಚೇರಿಗಳ ಮುಂಭಾಗದಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲಾಗುವುದು. ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಹೋರಾಟವನ್ನು ಮುಂದುವರಿಸಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ನಾಗರಾಜು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
