ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಗ್ರಾಮದ ಪೇಟೆ ಬೀದಿಯಲ್ಲಿ ‘ಶ್ರೀ ವಿದ್ಯಾ ಗಣಪತಿ ಗೆಳೆಯರ ಬಳಗ’ದ ವತಿಯಿಂದ ಆಯೋಜಿಸಲಾಗಿದ್ದ 29ನೇ ವರ್ಷದ ಗಣೇಶೋತ್ಸವವು ಅತ್ಯಂತ ವಿಶಿಷ್ಟ ಹಾಗೂ ಅದ್ದೂರಿಯಾಗಿ ಸಂಪನ್ನಗೊಂಡಿದೆ.
ಸತತ 29 ವರ್ಷಗಳಿಂದ ಪೇಟೆ ಬೀದಿಯ ಯುವಕರು ವಿಶಿಷ್ಟವಾಗಿ ಗಣಪತಿಯನ್ನು ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಈ ಬಾರಿ ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಪರಿಸ್ಥಿತಿಯನ್ನು ಬಿಂಬಿಸುವಂತೆ ‘ಹೊಲ ಹೂಳುವ ಗಣಪತಿ’ ಮಾದರಿಯಲ್ಲಿ ಗಣೇಶನನ್ನು ಕೂರಿಸಿದ್ದು ಈ ಬಾರಿಯ ವಿಶೇಷ ಆಕರ್ಷಣೆಯಾಗಿತ್ತು. ಇದರೊಂದಿಗೆ ಜಪ್ಪರದ ಮನೆ, ದೀಪದ ಲಾಟಿನ್, ಒಲೆ, ನೇಗಿಲು, ಹಸು, ಬಾವಿ ಮತ್ತು ಜಪ್ಪರದ ಕೆಳಗೆ ಬೆಳೆದ ರಾಗಿ ಪೈರು ಸೇರಿದಂತೆ ಅಪ್ಪಟ ಹಳ್ಳಿಯ ಸೊಗಡನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಲಾಯಿತು. ವಿಶೇಷವೆಂದರೆ, ಗ್ರಾಮದಲ್ಲಿ ಯಾರ ಹತ್ತಿರವೂ ಒಂದು ರೂಪಾಯಿಯನ್ನೂ ದೇಣಿಗೆ ಪಡೆಯದೆ, ಯುವಕರೇ ಸ್ವಂತ ಹಣದಿಂದ ಗಣೇಶೋತ್ಸವವನ್ನು ಆಚರಿಸುತ್ತಿರುವುದು ಈ ತಂಡದ ಹೆಮ್ಮೆಯ ಸಂಗತಿಯಾಗಿದೆ.

ಶನಿವಾರದಂದು ಹೊಳವನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗೋಷ್ಠಿಗಳೊಂದಿಗೆ ವಿಜೃಂಭಣೆಯ ಮೆರವಣಿಗೆ ನಡೆಸಿ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು. ಈ ವೇಳೆ ಆಗಮಿಸಿದ ಭಕ್ತ ಸಮೂಹಕ್ಕೆ ಭವ್ಯವಾದ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಆಯೋಜಕರಾದ ಉಮೇಶ್ (ಗೊಟ್ಟು) ಮಾತನಾಡಿ, ನಮ್ಮ ಯುವಕರ ತಂಡದಲ್ಲಿ ಯಾವುದೇ ಹುದ್ದೆಗಳನ್ನು ಸೃಷ್ಟಿಸಿಲ್ಲ; ಎಲ್ಲರೂ ಸಮಾನರು ಎಂಬ ಭಾವನೆಯಿಂದ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಹೊಲ ಹೂಳುವ ರೀತಿಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ ಎಂದರು. ಯುವಕರ ತಂಡದ ಸದಸ್ಯ ಅಭಿಷೇಕ್ (ಗಜ) ಮಾತನಾಡಿ, ಗ್ರಾಮೀಣ ಭಾಗದ ಸಂಸ್ಕೃತಿಯನ್ನು ಬಿಂಬಿಸುವ ಹಳ್ಳಿ ಸೊಗಡಿನ ಮಾದರಿಗಳನ್ನು ಪ್ರದರ್ಶಿಸಲಾಗಿದ್ದು, ಗ್ರಾಮದ ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗಣೇಶನ ದರ್ಶನ ಪಡೆದು ಧನ್ಯರಾಗಿದ್ದಾರೆ ಎಂದು ತಿಳಿಸಿದರು.
ಈ ಸಂಭ್ರಮದ ಕಾರ್ಯಕ್ರಮದಲ್ಲಿ ಸಂತೋಷ್ (ಗಂಗಣ್ಣ), ರಮೇಶ್, ಶರಣ್, ಚಂದ್ರು, ಶರಣ್ ಶಟ್ಟಿ, ಶ್ರೀನಿವಾಸ್, ರಾಜೇಶ್, ಶಶಿ, ಹೇಮಂತ್, ಮಂಜುನಾಥ್, ವಿವೇಕ್, ಮನೋಜ್, ಸಂತೋಷ್, ಕಿರಣ್ (ಡಿಸಿಸಿ), ಶರಣ್ ಸೇರಿದಂತೆ ಶ್ರೀ ವಿದ್ಯಾ ಗಣಪತಿ ಗೆಳೆಯರ ಬಳಗದ ಇತರ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
