ತುಮಕೂರು/ಮಧುಗಿರಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ಆಕ್ಷೇಪಿಸಿ, ದಲಿತ ಸಮುದಾಯದ 17 ವರ್ಷದ ಅಪ್ರಾಪ್ತ ಬಾಲಕನೋರ್ವನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿರುವ ದಾರುಣ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ರವಿವಾರ ಅಪರಾಹ್ನ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಸಿಂಹಾದ್ರಿ (17) ಕೊಲೆಯಾದ ದುರ್ದೈವಿ ಬಾಲಕ. ಈ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕಸಾಪುರ ಗ್ರಾಮದ ಮಾರುತೇಶ (ಬಂಡೆ ಗುಂಡ) ಎಂಬಾತನ ವಿರುದ್ಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ?
ಮೃತ ಸಿಂಹಾದ್ರಿಯ ತಾಯಿ ಅನ್ನಪೂರ್ಣ ಅವರು ನೀಡಿದ ದೂರಿನ ಪ್ರಕಾರ, ರವಿವಾರ ಅಪರಾಹ್ನ ಕಸಾಪುರ ಗ್ರಾಮದ ಊರ ಮಾರಮ್ಮ ದೇವಾಲಯದ ಮುಂಭಾಗದ ರಸ್ತೆಯಲ್ಲಿ ನಾಯಕ ಮತ್ತು ಒಕ್ಕಲಿಗ ಸಮುದಾಯಗಳ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಮೆರವಣಿಗೆಯಲ್ಲಿ ಕುಣಿಯಲು ಹೋಗಿದ್ದ ಸಿಂಹಾದ್ರಿಯನ್ನು ಕಂಡ ಆರೋಪಿ ಮಾರುತೇಶ, “ನೀನು ಕೀಳು ಜಾತಿಯವನು, ನಮ್ಮ ಗಣೇಶನ ಹತ್ತಿರ ಏಕೆ ಬಂದಿದ್ದೀಯಾ?” ಎಂದು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.
“ನಾನು ಗಣೇಶನನ್ನು ನೋಡಲು ಬಂದಿದ್ದೇನೆ” ಎಂದು ಸಿಂಹಾದ್ರಿ ಹೇಳಿದಾಗ, ಆಕ್ರೋಶಗೊಂಡ ಆರೋಪಿ ಏರುಧ್ವನಿಯಲ್ಲಿ ಬೈದು ಕಪಾಳಕ್ಕೆ ಹೊಡೆದಿದ್ದಾನೆ. ಬಳಿಕ ರಸ್ತೆ ಬದಿಯಲ್ಲಿದ್ದ ಕಲ್ಲಿನಿಂದ ಸಿಂಹಾದ್ರಿಯ ಎದೆಯ ಭಾಗಕ್ಕೆ ತೀವ್ರವಾಗಿ ಗುದ್ದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಸಿಂಹಾದ್ರಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯರು ಹಾಗೂ ಸ್ನೇಹಿತರು ಆತನನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
“ನನ್ನ ಮಗನನ್ನು ಕೀಳು ಜಾತಿಯವನೆಂಬ ಕಾರಣಕ್ಕೇ ಕೊಲೆ ಮಾಡಲಾಗಿದೆ. ಆದ್ದರಿಂದ ಆರೋಪಿ ಮಾರುತೇಶ ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಮೃತನ ತಾಯಿ ದೂರಿನಲ್ಲಿ ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಿಡಿಗೇಶಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಬಂಧನ ಹಾಗೂ ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
