ತುರುವೇಕೆರೆ: ತಾಂತ್ರಿಕ ದೋಷ ಹಾಗೂ ವೈರಿಂಗ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ಕುಟುಂಬ ಸದಸ್ಯರು ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತುರುವೇಕೆರೆ–ಕಲ್ಲೂರು ಕ್ರಾಸ್ ಮಾರ್ಗ ಮಧ್ಯೆ ನಡೆದಿದೆ.
ತಾಲೂಕಿನ ಕೊಂಡಜ್ಜಿ ಗ್ರಾಮದ ನಿವಾಸಿ ಕುಮಾರ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ಇವರು ಕುಟುಂಬ ಸಮೇತರಾಗಿ ಸಂಬಂಧಿಕರ ಮನೆಯ ಶುಭಕಾರ್ಯಕ್ಕೆ ಹೊರಟಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ಸುಮಾರು 6-00 ಗಂಟೆಯಲ್ಲಿ ಮಾಡಾಪಟ್ಟಣ ಗೇಟ್ ಹಾಗೂ ಪುರ ಗೇಟ್ ನಡುವೆ ಚಲಿಸುತ್ತಿದ್ದಾಗ ಈ ಅವಘಡ ನಡೆದಿದೆ. ಮಾರ್ಗ ಮಧ್ಯೆ ಕಾರಿನಲ್ಲಿ ತಾಂತ್ರಿಕ ದೋಷ ಉಂಟಾಗಿ ಶಾರ್ಟ್ ಸರ್ಕ್ಯೂಟ್ ಆಗಿದೆ ಎನ್ನಲಾಗಿದೆ.
ಕಾರಿನಲ್ಲಿ ಕಮಟು ವಾಸನೆ ಆವರಿಸಿದೆ. ವಾಸನೆ ಬರುತ್ತಿದ್ದಂತೆಯೇ ಕಾರು ಚಾಲನೆ ಮಾಡುತ್ತಿದ್ದ ಕುಮಾರ್ ಅವರ ಮಗ ಬಾಲು ಅವರು ತಕ್ಷಣ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ, ಕುಟುಂಬ ಸದಸ್ಯರೊಂದಿಗೆ ಕೆಳಗಿಳಿದಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದಿದೆ. ಸಮಯಕ್ಕೆ ಸರಿಯಾಗಿ ಎಲ್ಲರೂ ಕೆಳಗಿಳಿದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ತುರುವೇಕೆರೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ಬರುವುದರೊಳಗೆ ಕಾರಿನ ಶೇಕಡ 80ರಷ್ಟು ಭಾಗ ಸುಟ್ಟು ಹೋಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
