ನಮ್ಮ ತುಮಕೂರು/ಹಗರಿಬೊಮ್ಮನಹಳ್ಳಿ (ವಿಜಯನಗರ): ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ಮತ್ತು ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅದು ಸಮಾಜದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಮಕ್ಕಳ ಕಲ್ಯಾಣ ಸಮಿತಿಯ (CWC) ಸಂಪನ್ಮೂಲ ವ್ಯಕ್ತಿ ಡಾ. ತಿಪ್ಪೇಸ್ವಾಮಿ ಕೆ.ಟಿ. ಅಭಿಪ್ರಾಯಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಸಿಡಬ್ಲ್ಯೂಸಿ (CWC) ಸಂಸ್ಥೆಯು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ್ದ ಪೋಕ್ಸೋ ಕಾಯಿದೆ (POCSO Act) ಮತ್ತು ಬಾಲ್ಯ ವಿವಾಹ ನಿಷೇಧ ಕಾಯಿದೆ ಕುರಿತ ವಿಶೇಷ ತರಬೇತಿ ಕಾರ್ಯಾಗಾರವನ್ನು ಫೆಸಿಲಿಟೇಟ್ ಮಾಡಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಕುಟುಂಬಗಳೊಂದಿಗೆ ಮತ್ತು ಪುಟ್ಟ ಮಕ್ಕಳೊಂದಿಗೆ ನಿರಂತರ ಒಡನಾಟ ಹೊಂದಿರುವವರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು. ಬಾಲ್ಯ ವಿವಾಹದ ಸಿದ್ಧತೆಗಳು ನಡೆಯುತ್ತಿದ್ದರೆ ಅಥವಾ ಮಕ್ಕಳ ಮೇಲೆ ಯಾವುದೇ ರೂಪದ ಲೈಂಗಿಕ/ದೈಹಿಕ ಕಿರುಕುಳಗಳು ನಡೆಯುತ್ತಿದ್ದರೆ, ಅದರ ಆರಂಭಿಕ ಲಕ್ಷಣಗಳು ಮೊದಲು ಗೋಚರಿಸುವುದು ಇವರಿಗೇ. ಇವರ ಸಮಯಪ್ರಜ್ಞೆ ಮತ್ತು ತ್ವರಿತ ಮಾಹಿತಿಯಿಂದ ಮಾತ್ರ ಅದೆಷ್ಟೋ ಮುಗ್ಧ ಕಂದಮ್ಮಗಳ ಬದುಕು ಹಸನಾಗಲು ಸಾಧ್ಯ ಎಂದು ಡಾ. ತಿಪ್ಪೇಸ್ವಾಮಿ ವಿವರಿಸಿದರು.



ಕಾರ್ಯಾಗಾರದಲ್ಲಿ ಪೋಕ್ಸೋ ಕಾಯ್ದೆಯ ಕಟ್ಟುನಿಟ್ಟಿನ ನಿಯಮಗಳು, ಬಾಲ್ಯ ವಿವಾಹ ತಡೆ ಕಾಯಿದೆಯ ಕಾನೂನಾತ್ಮಕ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು. ಇದರ ಜೊತೆಗೆ, ಸಂಕಷ್ಟದಲ್ಲಿರುವ ಮಕ್ಕಳನ್ನು ಕಂಡಾಗ ಅವರೊಂದಿಗೆ ನಡೆದುಕೊಳ್ಳಬೇಕಾದ ಸೂಕ್ಷ್ಮತೆ, ಗೌಪ್ಯತೆ ಕಾಪಾಡುವುದು ಹಾಗೂ ಇಲಾಖಾ ಹಂತದಲ್ಲಿ ಪ್ರಕರಣವನ್ನು ತಕ್ಷಣವೇ ಮಕ್ಕಳ ರಕ್ಷಣಾ ಘಟಕ (DCPU) ಅಥವಾ ಮಕ್ಕಳ ಸಹಾಯವಾಣಿಗೆ (1098 / 112) ತಲುಪಿಸುವ ವಿಧಾನಗಳನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಲಾಯಿತು.
“ಗ್ರಾಮೀಣ ಮಟ್ಟದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸುರಕ್ಷಿತ ಬಾಲ್ಯವನ್ನು ಖಾತ್ರಿಪಡಿಸಲು ತಳಮಟ್ಟದ ಜಾಗೃತಿ ಅತ್ಯಗತ್ಯ. ಕಾನೂನಿನ ಅರಿವು ಹಾಗೂ ಸಾಮಾಜಿಕ ಜವಾಬ್ದಾರಿ ಒಂದಾದಾಗ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯ.”
— ಡಾ. ತಿಪ್ಪೇಸ್ವಾಮಿ ಕೆ.ಟಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
